ಮಂಗಳೂರು: ಸರ್ಕಾರ ರೂಪಿಸಿರುವ ಕಡ್ಡಾಯ ಶಿಕ್ಷಣ ಕಾಯಿದೆಯಿಂದಾಗಿ ಎಲ್ಲ ಮಕ್ಕಳಿಗೂ ಶಿಕ್ಷಣ ಲಭ್ಯ. ಯಾವುದೇ ಮಗುವು ಶಿಕ್ಷಣದಿಂದ ವಂಚಿತವಾಗಬಾರದೆಂಬ ಸದುದ್ದೇಶದಿಂದ ಕಾಯಿದೆ ರೂಪುಗೊಂಡಿದ್ದು ಸೌಲಭ್ಯದ ಸದ್ಬಳಕೆಯಾಗಬೇಕೆಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.
ಅವರಿಂದು ನಗರದ ಮಣ್ಣಗುಡ್ಡೆಯ ಗಾಂಧೀನಗರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲೆಗಾಗಿ ನಾವು ನೀವು ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಗುಣಾತ್ಮಕ ಶಿಕ್ಷಣಕ್ಕಾಗಿ ಕ್ರಿಯಾಶೀಲ ಆಡಳಿತ ಎಂಬ ಘೋಷವಾಕ್ಯದಡಿ ಶ್ವೇತಪತ್ರ ಹಾಗೂ ಕೈಪಿಡಿ ಬಿಡುಗಡೆ ಮಾಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಮಾತೃಭಾಷೆಯಲ್ಲಿ ಕಲಿಕೆಯಿಂದ ವಿಷಯಗ್ರಹಿಕೆ ಸುಲಭ ಎಂದ ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿ ಪೋಷಕರ ಮನೋಭಾವವನ್ನು ಬದಲಾಯಿಸುವಂತಹ ಉತ್ತಮ ಪರಿಸರವಿರಬೇಕು; ವಿಚಾರಗಳಿರಬೇಕು. ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿರಬೇಕು ಎಂದರು. ಎಸ್ ಎಸ್ ಎಲ್ ಸಿಯ ಫಲಿತಾಂಶವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಗ್ರಾಮೀಣ ಮಕ್ಕಳು ಫಲಿತಾಂಶದಲ್ಲಿ ಮೇಲುಗೈ ಪಡೆದಿರುವ ಅಂಶ ನಿಚ್ಛಳವಾಗಿ ಗೋಚರಿಸುತ್ತದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡದಲ್ಲಿ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿದೆ ಎಂದರು. ಶಾಲೆಯಲ್ಲಿರುವ ಶೈಕ್ಷಣಿಕ ಸೌಲಭ್ಯಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳಿಂದ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ಉಪಯೋಜನಾಧಿಕಾರಿ ಶಿವಪ್ರಕಾಶ್, ಕಾರ್ಪೊರೇಟರ್ ಅಮಿತಕಲಾ, ಅಕ್ಷರದಾಸೋಹ ಅಧಿಕಾರಿ ಮಂಜುಳ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಲಜಾಕ್ಷಿ, ಮುಖ್ಯೋಪಾಧ್ಯಾಯರಾದ ನೇತ್ರಾವತಿ, ಹಳೆ ವಿದ್ಯಾರ್ಥಿಗಳು ಶಾಲೆಯಲ್ಲಿ ಹಾಜರಿದ್ದರು.
Click this button or press Ctrl+G to toggle between Kannada and English