ಬೆಂಗಳೂರು: `ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ನೀಲಂ ಅಚ್ಯುತರಾವ್ (ಡಿಜಿಪಿ- ಐಜಿಪಿ)ಬುಧವಾರ ನಡೆದ ಸಮಾರಂಭದಲ್ಲಿ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮದ ಡಿಜಿಪಿ ಡಾ.ಎಸ್.ಟಿ.ರಮೇಶ್ ಅವರಿಂದ ಬೇಟನ್ ಪಡೆಯುವ ಮೂಲಕ ಅಧಿಕಾರ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು ಅವರು ರಾಜ್ಯದಲ್ಲಿ `ಶಾಂತಿ ಕಾಪಾಡುವ ಮೂಲಕ ಜನರು ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಡುವುದು ಮೊದಲ ಆದ್ಯತೆಯಾಗಿದೆ. ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ`ಎಂದು ಹೇಳಿದರು.
ಈ ಮೊದಲು ಈ ಹುದ್ದೆಯನ್ನು ನಿರ್ವಹಿಸಿದ ಅನೇಕ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಅವರಂತೆ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಹಿಂದಿನವರು ಮಾಡಬೇಕೆಂದುಕೊಂಡಿದ್ದ ಕೆಲವು ಕೆಲಸಗಳು ಹಾಗೇ ಉಳಿದಿವೆ. ಆ ಕೆಲಸಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ನಾನು ಸಹ ಜನರಿಗೆ ಅನುಕೂಲವಾಗುವಂತಹ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇನೆ` ಎಂದು ಅವರು ಭರವಸೆ ನೀಡಿದರು.
`ಠಾಣೆಗೆ ಬರುವ ಸಾರ್ವಜನಿಕರಿಗೆ ಪೊಲೀಸರು ಉತ್ತಮವಾಗಿ ಸ್ಪಂದಿಸುವ ವಾತಾವರಣ ನಿರ್ಮಿಸಲಾಗುತ್ತದೆ.ದೂರುಗಳನ್ನು ದಾಖಲಿಸಿಕೊಂಡು ಅವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.ಅಧಿಕಾರಿಗಳ ವರ್ಗಾವಣೆಯನ್ನು ಪೊಲೀಸ್ ಮಂಡಳಿಯ ಮೂಲಕವೇ ಮಾಡಲಾಗುತ್ತದೆ` ಎಂದು ಅಚ್ಯುತರಾವ್ ಹೇಳಿದರು.
ಡಿಜಿಪಿ- ಐಜಿಪಿ ಹುದ್ದೆಯಿಂದ ನಿರ್ಗಮಿಸಿದ ರಮೇಶ್ ಅವರು ಮಾತನಾಡಿ `ಐದು ತಿಂಗಳಿಗೂ ಹೆಚ್ಚು ಕಾಲ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ. ಸರ್ಕಾರ ನನಗೆ ಜವಾಬ್ದಾರಿ ವಹಿಸಿತ್ತು ಮತ್ತು ಕೆಲಸ ಮಾಡಲು ಅಪಾರ ಬೆಂಬಲ ನೀಡಿತ್ತು ಎಂದರು.
ಆಡಳಿತ ವಿಭಾಗದ ಎಡಿಜಿಪಿ ಗಾಂವ್ಕರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ರೂಪಕ್ ಕುಮಾರ್ ದತ್ತ,ಅಚ್ಯುತರಾವ್ ಪತ್ನಿ ಜಯಾ ಸಮಾರಂಭದಲ್ಲಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English