ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಜಾಗದಲ್ಲಿರುವ ಅಕ್ರಮ ಕಟ್ಟಡ ತೆರವುಗೊಳಿಸಲು ತತ್‌ಕ್ಷಣ ಕಾರ್ಯಾಚರಣೆ ಪ್ರಾರಂಭಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಜರಗಿದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಜಾಗದಲ್ಲಿ ಯಾವುದೇ ಅನಧಿಕೃತ ಕಟ್ಟಡಗಳು, ಅಂಗಡಿಗಳು ನಿರ್ಮಾಣವಾಗದಂತೆ ಇಲಾಖೆಯ ಅಧಿಕಾರಿಗಳು ನಿಗಾವಹಿಸಬೇಕು ಹಾಗೂ ಈಗಾಗಲೇ ಇರುವ ಅಕ್ರಮ ಕಟ್ಟಡಗಳು, ಅಂಗಡಿಗಳನ್ನು ತೆರವುಗೊಳಿಸಲು ಕೂಡಲೇ ಕ್ರಮಕೈಗೊಳ್ಳಬೇಕು. ವಾಹನಗಳು ಸಂಚಾರಿ ಕ್ಯಾಂಟೀನ್‌ಗಳು ಹೆದ್ದಾರಿ ಅಕ್ಕಪಕ್ಕಗಳಲ್ಲಿ 1 ಗಂಟೆಗಿಂತ ಹೆಚ್ಚು ಹೊತ್ತು ತಂಗಲು ಅವಕಾಶ ನೀಡಬಾರದು ಎಂದು ನಿರ್ದೇಶನ ನೀಡಿದರು.
ಹೆದ್ದಾರಿ ಪಕ್ಕದಲ್ಲಿ ಕಟ್ಟಡಗಳ ಹಾಗೂ ಇತರ ತ್ಯಾಜ್ಯ ಸುರಿದರೆ ಅಂತವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆೆ ನಳಿನ್ ಕುಮಾರ್ ಕಟೀಲು ಅಧಿಕಾರಿಗಳಿಗೆ ಸೂಚಿಸಿದರು. ಹೆದ್ದಾರಿ ಪಕ್ಕದಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಖಾಸಗಿ ಸಂಘ ಸಂಸ್ಥೆಗಳಿಗೆ ಅವಕಾಶವಿಲ್ಲ. ಪ್ರಸ್ತುತ ನಿರ್ಮಾಣವಾಗಿದ್ದರೆ ಅವುಗಳನ್ನು ತತ್‌ಕ್ಷಣ ತೆರವುಗೊಳಿಸಬೇಕು ಹಾಗೂ ಇಲಾಖೆ ವತಿಯಿಂದಲೇ ಬಸ್ ನಿಲ್ದಾಣಗಳ ನಿರ್ಮಾಣ ಮಾಡಬೇಕು. ಹೆದ್ದಾರಿ ಬದಿಗಳಲ್ಲಿ ಅನಧಿಕೃತ ಬೋರ್ಡ್‌ಗಳು, ಫಲಕಗಳು ಇದ್ದಲ್ಲಿ ತತ್‌ಕ್ಷಣ ತೆರವುಗೊಳಿಸಬೇಕು ಎಂದು ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಅಕ್ರಮವಾಗಿ ಕಲ್ಲಿನ ಕೋರೆಗಳನ್ನು ನಡೆಸುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿ 10 ಮೊಕದ್ದಮೆಗಳನ್ನು ದಾಖಲಿಸಲಾಗಿದ್ದು, ಸುಮಾರು 50 ಕೋರೆಗಳನ್ನು ಬಂದ್ ಮಾಡಿಸಲಾಗಿದೆ. ಒಟ್ಟು 47 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಮಾಹಿತಿ ನೀಡಿದರು.
ಕಲ್ಲಿನ ಕೋರೆಗಳ ಗುಂಡಿಗಳು ಮಳೆಗಾಲದಲ್ಲಿ ನೀರು ತುಂಬಿ ಅಪಾಯಕಾರಿಯಾಗಿ ಪಧಿರಿಣಮಿಸುತ್ತಿದ್ದು, ಈಗಾಗಲೇ ಹಲವು ಜೀವಹಾನಿಗಳು ಸಂಭವಿಸಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ರಕ್ಷಣಾಕ್ರಮ ಕೈಗೊಳ್ಳಬೇಕು ಎಂದು ನಳಿನ್ ಕುಮಾರ್ ಸೂಚಿಸಿದರು. ಜಿಲ್ಲೆಯಲ್ಲಿ ಸುಮಾರು 800 ಕಲ್ಲಿನ ಕೋರೆಗಳಿದ್ದು, ಇದರಲ್ಲಿ 400ಕ್ಕೂ ಅಧಿಕ ಕೋರೆಗಳ ಸುತ್ತ ಬೇಲಿ ಅಳವಡಿಸಲಾಗಿದೆ. ಉಳಿದಂತೆ ತಹಶೀಲ್ದಾರ್ ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಅಧಿಕಾರಿ ಅವರು ವಿವರಿಸಿದರು.
ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ ಅಪರ ಜಿಲ್ಲಾಧಿಕಾರಿ ಕುಮಾರ್, ಕಲ್ಲಿನಕೋರೆಗಳಿಗೆ ಸಂಬಂಧಿಸಿ ಈಗಾಗಲೇ ಜಿಲ್ಲಾಧಿಕಾರಿ ಅವರು ಅಧಿಕಾರಿಗಳ ಸಭೆ ನಡೆಸಿದ್ದು, ರಕ್ಷಣಾ ಕ್ರಮಗಳ ಅಳವಡಿಕೆಗೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಬೇಲಿ ಹಾಕಲು ಸಂಬಂಧಪಟ್ಟ ಇಲಾಖೆಯಲ್ಲಿ ಅನುದಾನ ಇಲ್ಲದಿರುವುದರಿಂದ ಗುತ್ತಿಗೆದಾರರೇ ಜವಾಧಿಬ್ದಾರಿ ವಹಿಸುವಂತೆ ಸೂಚಿಸಬೇಕು ಎಂದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಲ್ಲಿನ ಕೋರೆಗಳ ಪಟ್ಟಿಯನ್ನು ಪಂಚಾಯತ್‌ಗಳಿಗೆ ನೀಡಬೇಕು ಹಾಗೂ ಕೋರೆಯ ಸುತ್ತ ರಕ್ಷಣಾ ವ್ಯವಸ್ಥೆಗಳು ಇಲ್ಲದಿರುವ ಕೋರೆಗಳನ್ನು ಗುರುತಿಸಿ ಕ್ರಮಕೈಗೊಳ್ಳಬೇಕು ಎಂದು ನಳಿನ್ ಕುಮಾರ್ ಸಲಹೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ವಿಸ್ತಧಿರಧಿಣೆ ಕಾಮಗಾರಿಯಲ್ಲಿ ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ವಿತರಣೆಗೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿ ವಿಶೇಷ ಭೂಸ್ವಾಧೀನ ಅಧಿಕಾರಿಯವರಿಂದ ಪ್ರತಿ ಗುರುವಾರ ವಿಶೇಷ ಕಂದಾಯ ಅದಾಲತ್ ನಡೆಸಲಾಗುತ್ತಿದೆ. ಆದರೆ ಹೆದ್ದಾರಿ ಇಲಾಖೆಯಿಂದ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಪರಿಹಾರ ವಿತರಿಸಲು ಸಮಸ್ಯೆಯಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು. ಪರಿಹಾರ ಮೊತ್ತ ಬಿಡುಗಡೆಗೆ ಕೂಡಲೇ ಕ್ರಮಕೈಗೊಳ್ಳುವಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
ದ. ಕನ್ನಡ ಜಿಲ್ಲೆಯಲ್ಲಿ 49 ಶಂಕಿತ ಡೆಂಗ್ಯೂ ಜ್ವರ ಪ್ರಕರಣಗಳು ವರದಿಯಾಗಿವೆ. ಒಟ್ಟು 11 ಸಾವುಗಳು ಸಂಭವಿಸಿದ್ದು, ಇದರಲ್ಲಿ 3 ಡೆಂಗ್ಯೂ ಸಾವು ಖಚಿತ ಪಟ್ಟಿದೆ. ಉಳಿದವುಗಳ ವರದಿ ಬರಬೇಕಾಗಿದೆ. ಸುಳ್ಯ, ಪುತ್ತೂರು ಹಾಗೂ ಸುಳ್ಯ ತಾಲೂಕುಗಳಲ್ಲಿ ಡೆಂಗ್ಯೂ ಜ್ವರ ಹೆಚ್ಚು ಕಂಡುಬಂದಿದೆ . ಎಲ್ಲ ಪ್ರಾ. ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಔಷಧ ದಾಸ್ತಾನು ಇದೆ ಎಂದು ಜಿಲ್ಲಾ ಪ್ರಭಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾಹಿತಿ ನೀಡಿದರು. ವೈದ್ಯರ ಕೊರತೆ ಇರುವ ಕಡೆ ಖಾಸಗಿ ವೈದ್ಯಕೀಯ ಕಾಲೇಜುಗಳ ವೈದ್ಯರನ್ನು ನಿಯೋಜಿಸುವಂತೆ ಸಂಸದರು ಸೂಚಿಸಿದರು.
ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಆಯ್ಕೆಯಾಗಿರುವ ಬಳ್ಪ ಗ್ರಾ.ಪಂ.ನಲ್ಲಿ 5 ವರ್ಷಗಳಲ್ಲಿ 5 ಹಂತದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗುತ್ತಿದ್ದು, 20 ಕೋ. ರೂ. ಯೋಜನೆ ರೂಪಿಸಲಾಗಿದೆ. ಪ್ರಥಮ ಹಂತದಲ್ಲಿ ರಸ್ತೆ, ಆಸ್ಪತ್ರೆ ಹಾಗೂ ಶಾಲೆಗಳ ಕಾಮಗಾರಿ ಕೈಗೆತ್ತಿ ಪೂರ್ಣಗೊಳಿಸಲಾಗಿದೆ. ದ್ವಿತೀಯ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಪ್ರಗತಿಯಲ್ಲಿದೆ ಎಂದು ನಳಿನ್ ಕುಮಾರ್ ವಿವರಿಸಿದರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English