ಮಂಗಳೂರು: ಕುತ್ತಾರು ಜಂಕ್ಷನ್‌ನ ಅಂಗಡಿಯೊಂದರ ಮುಂದೆ ಸಾರ್ವಜನಿಕವಾಗಿ ನಶೆ ಏರಿಸಿಕೊಂಡಂತೆ ವರ್ತಿಸುತ್ತಿದ್ದ ಯುವತಿಯೋರ್ವಳು ಸಿಕ್ಕಸಿಕ್ಕವರಿಗೆ ಬೈದಾಡುತ್ತಾ ಸುಮಾರು ಒಂದು ಗಂಟೆಗೂ ಅಧಿಕ ಕಾಲ ರಾದ್ಧಾಂತ ಮಾಡಿರುವ ಘಟನೆ ನಡೆದಿದೆ. ಅಲ್ಲದೆ ನಾಗರಿಕರು ಮತ್ತು ಪೊಲೀಸರನ್ನು ಈ ಯುವತಿ ಬೆಸ್ತು ಬೀಳಿಸಿದ್ದಾಳೆ.
ಮುಡಿಪು ಐಟಿ ಕಂಪೆನಿಯಲ್ಲಿ ಎಂಜಿನಿಯರಿಂಗ್ ಕೆಲಸದಲ್ಲಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾಕೆ ಸಾರ್ವಜನಿಕರನ್ನು ನಿಂದಿಸಿದ್ದಕ್ಕೆ ಉಳ್ಳಾಲ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು.
ಕುತ್ತಾರಿನ ರಾಜರಾಜೇಶ್ವರಿ ದೇವಸ್ಥಾನದೊಳಗೆ ಚಪ್ಪಲಿ ಹಾಕಿಕೊಂಡೇ ದೇವರನ್ನು ಕಾಣಲೆಂದು ಒಳ ನಡೆಯಲು ಯತ್ನಿಸಿದ್ದಾಗ ಜನರೇ ತಡೆದಿದ್ದಾರೆ. ತನ್ನ ತಂದೆ ನ್ಯಾಯವಾದಿ. ನಿಮ್ಮನ್ನೆಲ್ಲಾ ಹೈಕೋರ್ಟ್ ಮೆಟ್ಟಿಲೇರಿಸುತ್ತೇನೆಂದು ಧಮ್ಕಿ ಹಾಕಿದ್ದಾಳೆ ಎನ್ನಲಾಗಿದೆ. ಕೊನೆಗೆ ಬೇರೆಯವರ ಮೊಬೈಲ್ ಮೂಲಕ ತನ್ನ ತಾಯಿಗೆ ಕರೆ ಮಾಡಿದಾಗ ಅಲ್ಲಿಂದ ತಾಯಿ ಅಳೋದನ್ನು ಕೇಳಿ ನೊಂದುಕೊಂಡಿದ್ದಾಳೆ. ಇದಕ್ಕಾಗಿ ನೆರೆದವರನ್ನು ಶಪಿಸಿದ್ದಾಳೆ.
ಆಕೆಯನ್ನು ಸಮಾಧಾನಗೊಳಿಸಿ ದೇವಸ್ಥಾನದಿಂದಲೇ ಊಟ ತರಿಸಿಕೊಡಲಾಯಿತು. ಆದರೆ ಯುವತಿ ಯಾರಿಗೂ ತನ್ನನ್ನು ಮುಟ್ಟಲು ಬಿಡಲಿಲ್ಲ. ಕೊನೆಗೂ ಯುವತಿಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಪೋಷಕರೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಆಸ್ಪತ್ರೆಯಲ್ಲೂ ಆಕೆ ವಿಚಿತ್ರವಾಗಿ ಆಡುತ್ತಿದ್ದಳೆಂದು ನೆರೆದವರು ಹೇಳಿದ್ದಾರೆ.
Click this button or press Ctrl+G to toggle between Kannada and English