ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಿಗೆ ಪ್ರತಿ ತಿಂಗಳು ಎರಡು ಬಾರಿ ಭೇಟಿ ನೀಡಲಾಗುವುದು: ಕಟೀಲ್‌

9:13 PM, Thursday, July 7th, 2016
Share
1 Star2 Stars3 Stars4 Stars5 Stars
(No Ratings Yet)
Loading...

Nalinಪುತ್ತೂರು: ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಿಗೆ ಪ್ರತಿ ತಿಂಗಳು ಎರಡು ಬಾರಿ ಭೇಟಿ ನೀಡಲಾಗುವುದು. ಈ ಹಿಂದೆ ಯೋಜನೆ ರೂಪಿಸಲಾಯಿತಾದರೂ ಕಾರ್ಯಕ್ರಮದ ಒತ್ತಡದಿಂದ ಭೇಟಿ ನೀಡಲು ಆಗಿರಲಿಲ್ಲ. ಮುಂದೆ ಕ್ಷೇತ್ರ ಪ್ರವಾಸ ಹಮ್ಮಿಕೊಂಡು ಜನರ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಅವರು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆದರ್ಶ ರೈಲು ನಿಲ್ದಾಣದ ಜೊತೆಗೆ ಜೆಪ್ಪು ಕುಡಿಪ್ಪಾಡಿ, ಸುಬ್ರಹ್ಮಣ್ಯ, ಎಡಮಂಗಲದಲ್ಲಿ ರಚನೆಯಾದ ಸೇತುವೆಗಳ ಉದ್ಘಾಟನೆ ನಡೆಯಲಿದೆ. ಸಚಿವರನ್ನು ಆಹ್ವಾನಿಸಿ ಉದ್ಘಾಟನೆ ನೆರವೇರಿಸಬೇಕೆಂಬ ಆಶಯವಿದ್ದು, ಇದರಿಂದ ಅಭಿವೃದ್ಧಿಗೆ ಇನ್ನೊಂದಷ್ಟು ಅನುದಾನ ಕೇಳಲು ಸಾಧ್ಯವಾಗುತ್ತದೆ. ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಶೀಘ್ರದಲ್ಲಿ ಉದ್ಘಾಟಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ಯೂ ಸಮಸ್ಯೆ ಇದೆ. ಆದ್ದರಿಂದ ತುರ್ತು ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಗ್ರಾಮ ಮಟ್ಟದ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದಲ್ಲಿ, ಖಾಸಗಿ ಆಸ್ಪತ್ರೆಯಿಂದ ವೈದ್ಯರನ್ನು ಬಳಸಿಕೊಳ್ಳುವಂತೆ ಕೆಡಿಪಿ ಸಭೆಯಲ್ಲಿ ಸೂಚಿಸಲಾಗಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಕ್ಷೇತ್ರ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಈ ಸಂದರ್ಭ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English