ನಿರ್ಮಾಣಗೊಂಡು ಎರಡು ವರ್ಷವಾದರೂ ಉಪಯೋಗ ಶೂನ್ಯ ಆಸ್ಪತ್ರೆ

12:28 PM, Tuesday, July 19th, 2016
Share
1 Star2 Stars3 Stars4 Stars5 Stars
(No Ratings Yet)
Loading...

Mulleriaಮುಳ್ಳೇರಿಯಾ: ನಿರ್ಮಾಣ ಕಾಮಗಾರಿ ಪೂರ್ತಿಗೊಂಡು ವರ್ಷಗಳೆರಡು ಕಳೆದರೂ ಮುಳ್ಳೇರಿಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆಗೊಳ್ಳದೆ ಉಪಯೋಗ ಶೂನ್ಯವಾಗಿದ್ದು,ಲಕ್ಷಾಂತರ ರೂ.ವ್ಯಯಿಸಿ ನಿರ್ಮಿಸಲಾದ ಕಟ್ಟಡ ವ್ಯರ್ಥವಾಗುತ್ತಿದೆ.

ಎಂಡೋಸಲ್ಫಾನ್ ಸಂತ್ರಸ್ಥರು ಅಧಿಕವಿರುವ ಪ್ರದೇಶವೆಂದು ಪರಿಗಣಿಸಿ ನಿರ್ಮಿಸಲಾದ ಈ ಆಸ್ಪತ್ರೆ ನಿತ್ಯ ಚಿಕಿತ್ಸೆಗಳಿಗೆ ಆಗಮಿಸುವ ನೂರಾರು ರೋಗಿಗಳಿಗೆ ಯಾವುದೇ ಪ್ರಯೋಜನಕ್ಕೆ ಬಾರದೆ ಉಪಯೋಗ ಶೂನ್ಯವಾಗಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.ಈ ನೂತನ ಕಟ್ಟಡ ನಿರ್ಮಾಣಕ್ಕೆ ಎಂಡೋಸಲ್ಫಾನ್ ಪ್ಯಾಕೇಜ್ ಹಾಗೂ ನಬಾರ್ಡ್ ಅನುದಾನದಿಂದ ಒಟ್ಟು 64ಲಕ್ಷ ರೂ.ಗಳನ್ನು ವ್ಯಯಿಸಿ 2003 ಮೇ ತಿಂಗಳಲ್ಲಿ ಕಾಮಗಾರಿ ಆರಂಭಿಸಿ 2004 ಜನವರಿಯಲ್ಲಿ ಪೂರ್ತೀಕರಿಸಲಾಗಿತ್ತು.ಎರಡು ಓಪಿ ವಿಭಾಗ,ಒಂದು ಪ್ರಯೋಗಾಲಯ,ಎರಡು ಒಬ್ಸರ್‌ವೇಶನ್ ಹಾಲ್,ಮೂರು ಕಾರ್ಯಾಲಯ ಕೊಠಡಿಗಳು, ಐದು ಶೌಚಾಲಯಗಳನ್ನೊಳಗೊಂಡ ಬೃಹತ್ ಕಟ್ಟಡ ಉದ್ಘಾಟನೆಗೆ ಕಾಯುತ್ತಿದೆ.ಇದೀಗ ಕಾರ್ಯಾಚರಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡವನ್ನು ನೌಕರರ ವಸತಿ ನಿಲಯವಾಗಿ ಪರಿಗಣಿಸಲು ಯೋಜನೆ ಇರಿಸಲಾಗಿತ್ತು.

ಅತ್ಯಂತ ಗ್ರಾಮೀಣ ಪ್ರದೇಶವಾಗಿ ಹಿಂದುಳಿದಿರುವ ಹಾಗೂ ಎಂಡೋಸಲ್ಫಾನ್ ಮಾರಕ ರೋಗದಿಂದ ಸಂಕಷ್ಟದಲ್ಲಿರುವ ಕಾರಡ್ಕ,ಬೆಳ್ಳೂರು,ಕುಂಬ್ಡಾಜೆ,ದೇಲಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾವಿರಾರು ಜನರಿಗೆ ಉಪಯೋಗವಾಗುವ ಅತ್ಯಾಧುನಿಕ ಸೌಲಭ್ಯದ ಈ ಆಸ್ಪತ್ರೆ ಕಟ್ಟಡದಲ್ಲಿ ಒಳರೋಗಿಗಳಾಗಿ ದಾಖಲಾತಿಗೊಳಿಸಿ ಚಿಕಿತ್ಸೆ ನೀಡುವ ಅಗತ್ಯಕ್ಕೆ ಈ ನೂತನ ಕಟ್ಟಡ ನಿರ್ಮಿಸಲಾಗಿತ್ತು.ಈಗಿನ ಹಳೆ ಕಟ್ಟಡದಲ್ಲಿ ಇಂತಹ ಸೌಕರ್ಯಗಳಿಲ್ಲದಿರುವುದನ್ನು ಮನಗಂಡು ಈ ಬೃಹತ್ ಯೋಜನೆಗೆ ರೂಪು ನೀಡಿ ನಿರ್ಮಿಸಿದ್ದರೂ ಕಟ್ಟಡ ಉದ್ಘಾಟನೆಗೊಳ್ಳದೆ ಇದ್ದೂ ಇಲ್ಲದಂತಾಗಿರುವುದು ಜನರನ್ನು ಹತಾಶೆಗೊಳಿಸಿದೆ.

ಅಧಿಕೃತರು ಉದ್ಘಾಟನೆಗೆ ಮೀನಮೇಷ ಎಣಿಸುತ್ತಿರುವುದರ ಬಗ್ಗೆ ಸ್ಪಷ್ಟ ಉತ್ತರಗಳನ್ನು ನೀಡಲು ಮುಂದಾಗದಿದ್ದು ಹಲವು ಸಂಶಯಗಳಿಗೆಡೆಮಾಡಿದೆ. ಈ ನಡುವೆ ಕಟ್ಟಡ ನಿರ್ಮಿಸಲು ಗುತ್ತಿಗೆ ಪಡೆದ ವ್ಯಕ್ತಿಗೆ ಸರಕಾರ ಈವರೆಗೆ ಶೇ.25 ರಷ್ಟು ಮೊತ್ತವನ್ನಾದರೂ ನೀಡದಿರುವುದರಿಂದ ಅವರೊಳಗಿನ ಶೀತಲ ಸಮರ ಕಾರಣ ಕಟ್ಟಡ ಉದ್ಘಾಟನೆಗೊಳ್ಳುತ್ತಿಲ್ಲವೆಂಬ ಮಾತುಗಳು ಕೇಲಿಬಂದಿದೆ.ಜೊತೆಗೆ ಕಟ್ಟಡದ ಕಾಮಗಾರಿ ಪೂರ್ತಿಯಾಗಿಯೂ ಹಸ್ತಾಂತರಿಸದಿರುವುದರಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗದೆ ಒಟ್ಟು ಗೊಂದಲವೇರ್ಪಟ್ಟ ಕಾರಣ ಜನರಿಗೆ ನೂತನ ಆಸ್ಪತ್ರೆ ಕಟ್ಟಡ ಬಳಸಲು ಯೋಗವಿಲ್ಲದಂತಾಗಿದೆ.

ಈ ನಿಟ್ಟಿನಲ್ಲಿ ಮುಳ್ಳೇರಿಯಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟಿಸುವಂತೆ ಒತ್ತಾಯಿಸಿ ನಾಗರಿಕರು ರಂಗಕ್ಕಿಳಿದಿದ್ದು ಜನಪರ ಕ್ರೀಯಾ ಸಮಿತಿ ರಚಿಸಲಾಗಿದೆ.ಕೆ.ಬಾಲಕೃಷ್ಣ ರೈ,ರಘುನಂದನ್ ಬಲಕ್ಕಲ್,ಇ.ಮೊಹಮ್ಮದ್ ಮೊದಲಾದವರ ನೇತೃತ್ವದ ಕ್ರೀಯಾ ಸಮಿತಿ ಮುಂದಿನ ಎರಡು ತಿಂಗಳೊಳಗೆ ನೂತನ ಕಟ್ಟಡವನ್ನು ಜನರ ಉಪಯೋಗಕ್ಕೆ ಬಳಸದಿದ್ದರೆ ಹೋರಾಟ ನಡೆಸಲಾಗುವ ಎಚ್ಚರಿಕೆ ನೀಡಿದ್ದಾರೆ.

ಸಾವಿರಾರು ಬಡಜನರ ಅಗತ್ಯಕ್ಕೆ ನಿರ್ಮಿಸಲಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ನೂತನ ಕಟ್ಟಡವನ್ನು ಇನ್ನಾದರೂ ಉದ್ಘಾಟಿಸಿ ಉಪಯೋಗಕ್ಕೆ ಲಭ್ಯವಾಗುವಂತೆ ಸಂಬಂಧಪಟ್ಟವರು ಮುತುವರ್ಜಿವಹಿಸಬೇಕು.ಗುತ್ತಿಗೆದಾರ ಮತ್ತು ಸಂಬಂಧಪಟ್ಟ ನಿರ್ಮಾಣ ಇಲಾಖೆಯ ಪರಸ್ಪರ ಮನಸ್ಥಾಪದ ಪರಿಣಾಮ ಜನಸಾಮಾನ್ಯರು ಇನ್ನೂ ಕಷ್ಟ ಅನುಭವಿಸುತ್ತಿರುವುದು ಅಪರಾಧವಾಗಿದ್ದು,ಮುಂದಿನ ಎರಡು ತಿಂಗಳುಗಳೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಹೋರಾಟ ನಡೆಸಲಾಗುವುದು ಎಂದು ಕ್ರೀಯಾ ಸಮಿತಿ ಅಧ್ಯಕ್ಷರಾದ ಕೆ.ಬಾಲಕೃಷ್ಣ ರೈ
ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English