ಕಾರ್ಮಿಕರ ಸಮಸ್ಯೆ ಆಲಿಸದ ಸರಕಾರ ಎಂಥದ್ದು ಎಂದು ಪ್ರಶ್ನಿಸಿದ ಜನಾರ್ದನ ಪೂಜಾರಿ

11:53 AM, Wednesday, July 27th, 2016
Share
1 Star2 Stars3 Stars4 Stars5 Stars
(No Ratings Yet)
Loading...

Janardhana-poojaryಮಂಗಳೂರು: ಸಿದ್ದರಾಮಯ್ಯ ಆಡಳಿತದಲ್ಲಿ ಕಾಂಗ್ರೆಸ್ ಅವನತಿಯಂಚಿನಲ್ಲಿದೆ. ಅವರ ಉಡಾಫೆ ಮಾತಿನಿಂದ ಕಾಂಗ್ರೆಸ್ ಶಕ್ತಿ ಕಳೆದುಕೊಂಡು ಬಲಹೀನವಾಗುತ್ತಿದೆ. ಕಾಂಗ್ರೆಸ್‍ಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಜನ ಬೀದಿಯಲ್ಲಿ ನಿಂತು ಸರ್ಕಾರ ಹಾಗೂ ಮುಖ್ಯಮಂತ್ರಿ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ಸಿಗ ಬಿ.ಜನಾರ್ದನ ಪೂಜಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಮೂರು ವರ್ಷಗಳಿಂದ ಯಾವುದೇ ಅಭ್ಯುದಯಕಾರಿ ಕಾರ್ಯಕ್ರಮ ನೀಡಿಲ್ಲ. ಪೊಲೀಸ್ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳಿಂದ ಬೇಸತ್ತು ಆತ್ಮಹತ್ಯೆ ಹಾಗೂ ಆತ್ಮಹತ್ಯೆ ಯತ್ನ ನಡೆಸುತ್ತಿದ್ದರೆ ತಪ್ಪಿತಸ್ಥರ ವಿರುದ್ಧ ಎಫ್‍ಐಆರ್ ದಾಖಲು ಮಾಡಲು ಸರ್ಕಾರ ಹಿಂದೆ ಮುಂದೆ ನೋಡುತ್ತಿದೆ. ಕೆಎಸ್‍ಆರ್‌ಟಿಸಿ ನೌಕರರು ತಮ್ಮ ವೇತನ ಹೆಚ್ಚಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿ ಕೋಟ್ಯಂತರ ರೂಪಾಯಿ ನಷ್ಟ ಮಾಡಿದರೂ ಸರ್ಕಾರ ಆ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರ ಸಮಸ್ಯೆ ಆಲಿಸದ ಸರಕಾರ ಎಂಥದ್ದು ಎಂದು ಪ್ರಶ್ನಿಸಿದ ಅವರು, ತಾನೂ ಕೇಂದ್ರ ಸಚಿವನಾಗಿದ್ದೆ. ಹೀಗೆಲ್ಲಾ ವರ್ತಿಸಿಲ್ಲ ಎಂದರು. ಸಿದ್ದರಾಮಯ್ಯರ ಕುರ್ಚಿ ಅಲುಗಾಡುತ್ತಿದೆ. ಇನ್ನೂ ಕಾಲ ಮಿಂಚಿಲ್ಲ. ತಕ್ಷಣ ದಿಲ್ಲಿಗೆ ಹೋಗಿ ಹೈಕಮಾಂಡ್ ಜೊತೆಗೆ ಮಾತನಾಡಿ ಕುರ್ಚಿ ಬಿಟ್ಟುಕೊಡಿ. ಕಾಂಗ್ರೆಸ್ ಮುಖಂಡರಾದ ಆಸ್ಕರ್ ಫರ್ನಾಂಡಿಸ್, ಮಲ್ಲಿಕಾರ್ಜುನ ಖರ್ಗೆ, ಡಾ. ಪರಮೇಶ್ವರ್‌ ಅವರಂತಹ ಅರ್ಹ ನಾಯಕರು ಇದ್ದಾರೆ. ಮಹಿಳಾ ಶಕ್ತಿಯಾಗಿ ಮೋಟಮ್ಮ ಕೂಡಾ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗ್ಯರಿದ್ದಾರೆ ಎಂದರು.

ಜನಾರ್ದನ ಪೂಜಾರಿ ಪಕ್ಷದ ಕಚೇರಿಯಲ್ಲಿದ್ದುಕೊಂಡೇ ಪಕ್ಷದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಮಾತಿಗೆ ಪ್ರತಿಕ್ರಿಯಿಸಿದ ಅವರು, ಪೂಜಾರಿ ಎಂದಿಗೂ ಕಾಂಗ್ರೆಸ್ ವಿರೋಧಿಯಲ್ಲ. ಪಕ್ಷವನ್ನು ಉಳಿಸಲು ಹೊರಟಿದ್ದೇನೆ. ಆದರೆ, ಅದು ಅವರಿಗೆ ಅರ್ಥವಾಗಿಲ್ಲ ಎಂದರು.

ಕಾರ್ಯಾಧ್ಯಕ್ಷರಿಗೆ ಮುಜುಗರವಾಗಬಾರದೆಂದು ತಾನು ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇನೆ ಹೊರತು ಯಾರಿಗೂ ಹೆದರಿಯಲ್ಲ ಎಂದರು. ಜಿಲ್ಲಾಧ್ಯಕ್ಷರು ಬರುವ ಮೊದಲೂ ತಾನು ಪತ್ರಿಕಾಗೋಷ್ಠಿ ನಡೆಸುತ್ತಿದ್ದೆ ಎಂದರು. ಪೂಜಾರಿಯನ್ನು ಪಕ್ಷದಿಂದ ಬದಿಗಿರಿಸಲು ಅಥವಾ ನಿರ್ಲಕ್ಷಿಸಲು ಈಗಿನ ನಾಯಕರಿಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English