ಮಂಗಳೂರು: ಆಗಸ್ಟ್ 5ರಿಂದ ಆರಂಭಗೊಳ್ಳಲಿರುವ ರಿಯೋ ಒಲಿಂಪಿಕ್ಸ್‌ಗೆ ಆಳ್ವಾಸ್ ಕಾಲೇಜಿನ ಕ್ರೀಡಾಪಟು ಧರುಣ್ ಅಯ್ಯ ಸ್ವಾಮಿ ಅರ್ಹತೆ ಪಡೆದಿದ್ದಾರೆ.
4X400 ಮೀಟರ್ ರಿಲೇಯಲ್ಲಿ ಸ್ಪರ್ಧಿಸಲು ಭಾರತ ತಂಡವನ್ನು ಪ್ರತಿನಿಧಿಸಲಿರುವ 6 ಆಟಗಾರರ ಪೈಕಿ ಧರುಣ್ ಕೂಡಾ ಒಬ್ಬ. ಕಳೆದ ವರ್ಷದ ಅಖಿಲ ಭಾರತ ಅಥ್ಲೆಟಿಕ್ಸ್ 400 ಮೀಟರ್ ಓಟದಲ್ಲಿ ಚಿನ್ನ, ಹರ್ಡಲ್ಸ್‌ನಲ್ಲಿ ಕೂಟ ದಾಖಲೆ ಮತ್ತು ಚಿನ್ನ ಗೆದ್ದು ದಾಖಲೆ ನಿರ್ಮಿಸಿದ್ದಾರೆ. 400 ಮೀಟರ್ ಓಟವನ್ನು 46.31 ಸೆಕೆಂಡ್‌ನಲ್ಲಿ ಗುರಿ ಮುಟ್ಟಿರುವುದು ಧರುಣ್ ಸಾಧನೆಯಾಗಿದೆ.
ಮೂಲತ: ತಮಿಳುನಾಡಿನವರಾದ ಧರುಣ್, ಪ್ರಸ್ತುತ ಆಳ್ವಾಸ್‌ನ ಬಿಹೆಚ್‌ಆರ್‌ಡಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದು, 20 ವರ್ಷದವರಾದ ಇವರು ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಆಟಗಾರರ ಪೈಕಿ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದಾರೆ. ಧರುಣ್ ಸಾಧನೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆ 1 ಲಕ್ಷ ರೂ. ನೀಡಿ ಪ್ರೋತ್ಸಾಹಿಸಿದೆ. ಜೊತೆಗೆ ಅವರ ತರಬೇತಿಗಾಗಿ ಪ್ರತಿ ತಿಂಗಳು 20 ಸಾವಿರ ರೂ. ವ್ಯಯಿಸುತ್ತಿದೆ.
ಧರುಣ್ ಜೊತೆಗೆ ಸಂಸ್ಥೆಯ ಪ್ರಾಯೋಜಿತ ವಿದ್ಯಾರ್ಥಿ ಇಂದ್ರಜಿತ್, ಹಳೆ ವಿದ್ಯಾರ್ಥಿಗಳಾದ ಪೂವಮ್ಮ ಹಾಗೂ ಅಶ್ವಿನಿ ಅಕ್ಕುಂಜೆ ಕೂಡಾ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳ ಖರ್ಚು, ಇನ್ನಿತರ ವೆಚ್ಚವನ್ನು ಸಂಸ್ಥೆಯೇ ಭರಿಸುತ್ತಿದೆ. 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಆಳ್ವಾಸ್ ಪ್ರಾಯೋಜಿತ ಸತೀಶ್ ರೈ ಪಾಲ್ಗೊಂಡಿದ್ದರು. ಬಳಿಕ ಮತ್ತೆ 4 ಆಟಗಾರರು ಆಳ್ವಾಸ್ ಬಳಗದವರಾಗಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ಕಾಲೇಜಿಗೆ ಹೆಮ್ಮೆಯ ವಿಷಯ ಎನ್ನಲಾಗಿದೆ.
Click this button or press Ctrl+G to toggle between Kannada and English