ಯೋಧರ ಮನೆ ಮಂದಿಯ ರಕ್ಷಣೆ ನನ್ನ ಕರ್ತವ್ಯ: ಡಾ| ಜಿ. ಪರಮೇಶ್ವರ್‌

2:34 PM, Thursday, July 28th, 2016
Share
1 Star2 Stars3 Stars4 Stars5 Stars
(No Ratings Yet)
Loading...

Ekanatha-Shettyಬೆಳ್ತಂಗಡಿ: ನಾಪತ್ತೆಯಾಗಿರುವ ಸೇನಾ ವಿಮಾನದಲ್ಲಿದ್ದ ಗುರುವಾಯನಕೆರೆಯ ಯೋಧ ಕೆ. ಏಕನಾಥ ಶೆಟ್ಟಿ ಅವರ ಮನೆಗೆ ಗೃಹಸಚಿವ ಡಾ| ಜಿ. ಪರಮೇಶ್ವರ್‌ ದೂರವಾಣಿ ಕರೆ ಮಾಡಿದ್ದಾರೆ.

ಯೋಧನ ಪತ್ನಿ ಶಿಕ್ಷಕಿ ಜಯಂತಿ ಅವರ ಜತೆ ಮಾತನಾಡಿದ ಸಚಿವರು ಮಾಜಿ ಹಾಗೂ ಹಾಲಿ ಯೋಧರ ಮನೆ ಮಂದಿಯ ರಕ್ಷಣೆ ನನ್ನ ಕರ್ತವ್ಯ. ನಾನು ಕರೆ ಮಾಡುವಾಗ ಆದ ವಿಳಂಬಕ್ಕೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದಕ್ಕೂ ಮುನ್ನ ಕೇಂದ್ರ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್‌ ಕರೆ ಮಾಡಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾ| ಪ್ರಭಾಕರ ಭಟ್‌ ಕಲ್ಲಡ್ಕ, ಡಾ| ಕಮಲಾ ಭಟ್‌ ಅವರು ಮನೆಗೆ ಭೇಟಿ ನೀಡಿದ್ದಾರೆ. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಡಾ| ಬಿ.ಎ. ಕುಮಾರ ಹೆಗ್ಡೆ ಅವರು ಭೇಟಿ ನೀಡಿದ್ದು ಧೈರ್ಯ ತುಂಬಿದ್ದಾರೆ. ಯೋಧನ ಪುತ್ರಿಯ ವಿದ್ಯಾಭ್ಯಾಸದ ಕುರಿತು ಪೂರಕ ಸ್ಪಂದನೆ ನೀಡುವುದಾಗಿ ಹೇಳಿ ಪರೀಕ್ಷೆಗೆ ಬದಲಿ ವ್ಯವಸ್ಥೆ, ಹಾಜರಾತಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಸೇನೆಯ ಕಂಟ್ರೋಲ್‌ ರೂಮ್‌ನಿಂದ ಸಕಾರಾತ್ಮಕವಾದ ಕರೆಯೊಂದು ಬಂದಿದೆ. ಸಂಜೆಯ ವೇಳೆಗೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಾಂಚೋಡು ಗೋಪಾಲಕೃಷ್ಣ ಭಟ್‌ ಅವರಿಗೆ ಕಂಟ್ರೋಲ್‌ ರೂಂನಿಂದ ಕರೆ ಬಂದಿದ್ದು ಅದರಲ್ಲಿ ಸೇನಾ ವಿಮಾನದ ಕುರಿತು ಸಿಗ್ನಲ್‌ ಸಿಕ್ಕಿದ್ದನ್ನು ತಿಳಿಸಿದ್ದಾರೆ. ವಿಮಾನದ ಡಾಟಾ ಬೋರ್ಡ್‌ನಿಂದ ಇಎಲ್‌ಟಿ (ಎಲೆಕ್ಟ್ರಾನಿಕ್‌ ಲೈಟಿಂಗ್‌ ಟ್ರಾನ್ಸ್‌ಮಿಷನ್‌)ಯ ಐದು ಬಾರಿ ಸಿಗ್ನಲ್‌ ದೊರೆತಿದೆ.

ಈ ಸಿಗ್ನಲ್‌ ಸದ್ಯ ನಾಪತ್ತೆಯಾದ ಎಎನ್‌32 ವಿಮಾನದ ಸಿಗ್ನಲ್‌ ಆಗಿರಬಹುದೇ ಅಥವಾ ಈ ಹಿಂದೆ ನಾಪತ್ತೆಯಾದ ಯಾವುದಾದರೂ ವಿಮಾನ, ಹೆಲಿಕಾಪ್ಟರ್‌ನದ್ದು ಇರಬಹುದೇ, ನಮ್ಮ ದೇಶದ ಅಥವಾ ಬೇರೆ ದೇಶದ ಪತನವಾದ ವಿಮಾನದ ಸಿಗ್ನಲ್‌ ಇರಬಹುದೇ ಎನ್ನುವುದು ದೃಢಗೊಂಡಿಲ್ಲ.

ಸಿಗ್ನಲ್‌ ಸಿಕ್ಕಿದ ಜಾಗದಲ್ಲಿ ತೀವ್ರಶೋಧ ನಡೆಸಲಾಗುತ್ತಿದೆ. ಸಮೀಪದ ರಾಷ್ಟ್ರಗಳಿಗೆ ಕೂಡ ಮಾಹಿತಿ ನೀಡಲಾಗಿದ್ದು ಬಿರುಗಾಳಿಗೆ ಸಿಲುಕಿ ಬೇರೆ ರಾಷ್ಟ್ರಗಳ ಮಿತಿಯ ಸಮುದ್ರದಲ್ಲಿ ಇದ್ದರೆ ಮಾಹಿತಿ ನೀಡಿ ಎಂದು ಕೇಂದ್ರ ಸರಕಾರ ಹೇಳಿದೆ. ಬುಧವಾರ ಬೆಳಗ್ಗೆ ಬಂದ ಕಂಟ್ರೋಲ್‌ ಕರೆಯ ಪ್ರಕಾರ ಈಗಾಗಲೇ ಸೇನೆ ವಿಮಾನದಲ್ಲಿದ್ದ ಅಷ್ಟೂ ಮಂದಿಯ ವಿವರಗಳನ್ನು ಬಿಡುಗಡೆ ಮಾಡಿದ್ದು ಕೇಂದ್ರ ಸರಕಾರಕ್ಕೆ ರವಾನಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English