ಇರಾ ಗ್ರಾಮದಲ್ಲಿ, ಗ್ರಾಮದ ಸಮಗ್ರ ಮಾಹಿತಿ ನೀಡುವ ರಾಜ್ಯದ ಮೊತ್ತ ಮೊದಲ ಜಾಲತಾಣ

1:58 PM, Friday, July 29th, 2016
Share
1 Star2 Stars3 Stars4 Stars5 Stars
(No Ratings Yet)
Loading...

Ira-villageಉಳ್ಳಾಲ: ಮಾದರಿ ಸ್ವತ್ಛ ಗ್ರಾಮ ಪುರಸ್ಕಾರ ಪಡೆದು ದೇಶದ ಗಮನ ಸೆಳೆದಿದ್ದ ಪುಟ್ಟ ಗ್ರಾಮ ಇರಾ ಇದೀಗ ರಾಜ್ಯದಲ್ಲೇ ಮತ್ತೂಂದು ವಿನೂತನ ಪ್ರಯೋಗಕ್ಕೆ ಸಾಕ್ಷಿಯಾಗಿದೆ. ಗ್ರಾಮದ ಸಮಗ್ರ ಮಾಹಿತಿ ನೀಡುವ ರಾಜ್ಯದ ಮೊತ್ತ ಮೊದಲ ಜಾಲತಾಣ ನಿರ್ಮಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಗ್ರಾಮ ಮತ್ತೆ ಸುದ್ದಿಯಲ್ಲಿದೆ.

ಇರಾ ಗ್ರಾಮಕ್ಕೆ ಪ್ರತ್ಯೇಕವಾದ ಜಾಲತಾಣವೊಂದನ್ನು ರಚಿಸಲಾಗಿದ್ದು, ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್‌ ಅಧ್ಯಕ್ಷ ಚಂದ್ರಹಾಸ ಕರ್ಕೇರ ಲೋಕಾರ್ಪಣೆ ಮಾಡಿದರು.

ಇರಾ ಗ್ರಾಮದ ಯುವಕರ ತಂಡವೊಂದು ಇಂಥದ್ದೊಂದು ಜಾಲತಾಣವನ್ನು ರೂಪಿಸಿದ್ದು, ಗ್ರಾಮದ ಸಂಪೂರ್ಣ ಮಾಹಿತಿ ತಾಣದಲ್ಲಿ ಲಭ್ಯವಾಗಲಿದೆ. ನಮ್ಮ ಇರಾ.ಕಾಮ್‌ ಎಂಬ ಹೆಸರಿನ ಈ ಜಾಲತಾಣದಲ್ಲಿ ಗ್ರಾಮಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಹಾಕಲಾಗಿದೆ. ರಾಜ್ಯದಲ್ಲಿ ಈವರೆಗೆ ಯಾವ ಗ್ರಾಮವೂ ತನ್ನದೇ ಆದ ಜಾಲತಾಣ ಹೊಂದಿದ ಉದಾಹರಣೆಗಳಿಲ್ಲ.

ಸರಕಾರಿ ಜಾಲತಾಣಗಳು ಕೂಡ ಪ್ರತ್ಯೇಕವಾಗಿ ಯಾವ ಗ್ರಾಮದ ಬಗ್ಗೆಯೂ ಮಾಹಿತಿ ಕೊಡುವುದಿಲ್ಲ. ಹೀಗಾಗಿ ಇರಾ ಗ್ರಾಮದ ಸಮಗ್ರ ಮಾಹಿತಿಯನ್ನು ಗ್ರಾಮಸ್ಥರಿಗೆ ತಲುಪಿಸುವ ಉದ್ದೇಶದಿಂದ ನಮ್ಮ ಇರಾ.ಕಾಮ್‌ ಎಂಬ ಜಾಲತಾಣ ಜನ್ಮ ತಳೆದಿದೆ. ಈ ಜಾಲತಾಣ ಯಾವುದೇ ವ್ಯಾವಹಾರಿಕ ಉದ್ದೇಶದಿಂದ ರೂಪುಗೊಂಡದ್ದಲ್ಲ. ಮಾದರಿ ಗ್ರಾಮಕ್ಕೆ ಭವಿಷ್ಯದಲ್ಲಿ ಉಪಯೋಗವಾಗಲಿ ಅನ್ನೋ ಸದುದ್ದೇಶದಿಂದ ಈ ಜಾಲತಾಣವನ್ನು ರೂಪಿಸಲಾಗಿದೆ.

ಸ್ವತಃ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಕೂಡ ಈ ವಿನೂತನ ಪ್ರಯೋಗವನ್ನು ಹೊಗಳಿದ್ದಾರೆ. ಗ್ರಾಮದ ಅಭಿವೃದ್ಧಿಗೆ ತಾಂತ್ರಿಕತೆಯ ಸ್ಪರ್ಶ ನೀಡಿದ ಯುವಕರ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಒಂದು ವೆಬ್‌ ತಾಣವನ್ನು ರೂಪಿಸಿ ಅದನ್ನು ನಿರ್ವಹಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ನಮ್ಮ ಇರಾ.ಕಾಮ್‌ ಈ ಮಟ್ಟಿಗೆ ವಿನೂತನ ಪ್ರಯೋಗ. ಇನ್ನು ಮುಂದೆ ಇರಾ ಗ್ರಾಮದ ಜನತೆ ಗ್ರಾಮದ ಸಂಪೂರ್ಣ ಮಾಹಿತಿ, ಸರಕಾರದಿಂದ ಸಿಗುವ ಸೌಲಭ್ಯದ ಕುರಿತ ಮಾಹಿತಿ, ಗ್ರಾಮ ಪಂಚಾಯತ್‌ನ ಎಲ್ಲ ಸದಸ್ಯರ, ಸಿಬಂದಿಯ ಮಾಹಿತಿಯನ್ನು ಈ ಜಾಲತಾಣದಲ್ಲಿ ಪಡೆದುಕೊಳ್ಳಬಹುದು. ಲೈನ್‌ಮನ್‌, ಪೋಸ್ಟ್‌ ಮನ್‌ ದೂರವಾಣಿ ಸಂಖ್ಯೆ ಸೇರಿದಂತೆ ಎಲ್ಲವೂ ಇಲ್ಲಿ ಲಭ್ಯ.

ಗ್ರಾಮದ ಜನ ಇನ್ನು ಮುಂದೆ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಗ್ರಾ.ಪಂ. ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಮೊಬೈಲ್‌ ಇಲ್ಲವೇ ಕಂಪ್ಯೂಟರ್‌ನಲ್ಲಿ ನಮ್ಮ ಇರಾ.ಕಾಮ್‌ಗೆ ಭೇಟಿ ಕೊಟ್ಟರೆ ಸಾಕು ಬೆರಳ ತುದಿಯಲ್ಲೇ ಎಲ್ಲ ಮಾಹಿತಿಗಳು ಲಭ್ಯವಾಗುತ್ತವೆ. ವೆಬ್‌ ತಾಣದಲ್ಲಿರುವ ದೂರವಾಣಿ ಸಂಖ್ಯೆಯನ್ನು ಹಿಡಿದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಇನ್ನು ಸುಲಭವಾಗಲಿದೆ.

ಇರಾ.ಕಾಮ್‌ ಅನ್ನೋದು ಯಾವುದೇ ಸರಕಾರಿ ಜಾಲತಾಣವಲ್ಲ. ಹೀಗಿದ್ದರೂ ಯಾವ ಸರಕಾರಿ ಇಲಾಖೆಯ ಜಾಲತಾಣಕ್ಕೂ ಕಡಿಮೆಯಿಲ್ಲ ಅನ್ನುವ ರೀತಿಯಲ್ಲಿ ಇದನ್ನು ರೂಪಿಸಲಾಗಿದೆ. ಈ ಜಾಲತಾಣವನ್ನು ಗ್ರಾಮದ ಮುತ್ತು ಅಂತಾನೆ ಉಲ್ಲೇಖೀಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯ ಡಿಜಿಟಲ್‌ ಇಂಡಿಯಾ ಕಲ್ಪನೆಗೆ ಸಾಕ್ಷಿಯಾಗಿದೆ. ಈ ತಾಣದಲ್ಲಿ ಗ್ರಾಮದ ಕಲ್ಪನೆ, ಸಂಪರ್ಕದ ವಿವರ, ಮನವಿ, ಸೇವೆ, ಸಾಹಿತ್ಯ ಲೋಕ, ಕೃಷಿ ಮಾಹಿತಿ, ಗ್ರಾಮದ ಪ್ರತಿಭೆ, ಪತ್ರಿಕೆ ವರದಿ, ವಾರ್ಡ್‌ ಸದಸ್ಯರು ಹೀಗೆ ಇರಾ ಗ್ರಾಮಕ್ಕೆ ಸಂಬಂಧಿಧಿಸಿದ ಹತ್ತು ಹಲವು ಕಲ್ಪನೆಗೆ ಡಿಜಿಟಲ್‌ ರೂಪ ಕೊಡಲಾಗಿದೆ. ಗ್ರಾಮದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿಕರಿಗೆ ಸಂಬಂಧಿಸಿದ ಮಾಹಿತಿ ಹಾಗೂ ಗ್ರಾಮದ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸುವ ವಿಭಿನ್ನ ಪ್ರಯೋಗಕ್ಕೂ ಈ ಜಾಲತಾಣ ತೆರೆದುಕೊಂಡಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English