ಬದಿಯಡ್ಕ: ಭಾಷೆ,ಸಂಸ್ಕೃತಿಗಳ ಉಳಿವಿಗೆ ಲಿಪಿಯನ್ನು ಅಭ್ಯಸಿಸಿ ಬಳಕೆಗೆ ತರುವುದು ಅತ್ಯಗತ್ಯ.ಭಾಷೆಗಳ ಸಾಹಿತ್ಯ ಬೆಳೆದಷ್ಟು ಭಾಷೆ ಗಟ್ಟಿಗೊಳ್ಳುತ್ತದೆ.ಈ ನಿಟ್ಟಿನಲ್ಲಿ ಪ್ರಾಚೀನವಾದ ತುಳು ಲಿಪಿಯನ್ನು ಬಳಸಿ ಬೆಳೆಸುವುದರ ಬಗ್ಗೆ ಆಸಕ್ತಿ ವಹಿಸಿ ಕಾರ್ಯಪ್ರವೃತ್ತರಾಗಬೇಕೆಂದು ನಿವೃತ್ತ ಪ್ರಾಂಶುಪಾಲ,ವಿಶ್ವ ತುಳುವೆರೆ ಆಯನೊ ಸಮಿತಿಯ ಕಾರ್ಯಾಧ್ಯಕ್ಷ ಪ್ರೊ.ಎ.ಶ್ರೀನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬದಿಯಡ್ಕದ ವಿಶ್ವ ತುಳುವರೆ ಆಯನೊ ಕೂಟೊ ಬದಿಯಡ್ಕ,ತುಳು ವರ್ಲ್ಡ್ ಬದಿಯಡ್ಕ,ಮಂಗಳೂರಿನ ನಮ್ಮ ತುಳುನಾಡು ಟ್ರಸ್ಟ್ ಮತ್ತು ಬದಿಯಡ್ಕದ ಕೋ-ಓಪರೇಟಿವ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕೋ-ಓಪರೇಟಿವ್ ಸಭಾಂಗಣದಲ್ಲಿ ಆಯೋಜಿಸಿದ ಒಂದು ದಿನದ ತುಳು ಲಿಪಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದ್ರಾವಿಡ ಭಾಷಾ ವರ್ಗದಲ್ಲಿ ಅತ್ಯಂತ ಪ್ರಾಚೀನತೆ ಮತ್ತು ಮಹತ್ವಪೂರ್ಣ ಉದ್ಗ್ರಂಥಗಳು ಬರೆಯಲ್ಪಟ್ಟ ತುಳು ಲಿಪಿ ಬಳಸುವಿಕೆಯ ಕೊರತೆಯಿಂದ ಹಿನ್ನಡೆಗೆ ಸರಿದಿದ್ದರೂ ಆ ಲಿಪಿಯ ಬಗ್ಗೆ ಮತ್ತೊಮ್ಮೆ ನೆನಪಿಸಿದ ನಮ್ಮ ಜಿಲ್ಲೆಯವರೇ ಆದ ದಿ.ವೆಂಕಟರಾಜ ಪುಣಿಚಿತ್ತಾಯರ ಸಾಧನೆಯನ್ನು ಸ್ಮರಿಸಬೇಕಾಗಿದ್ದು,ಅವರ ಸಾಧನೆಯ ಗುರಿಮುಟ್ಟಿಸುವಲ್ಲಿ ಮುಂದಿನ ಯುವ ಜನಾಂಗವನ್ನು ತಯಾರುಗೊಳಿಸಬೇಕಾಗಿದೆಯೆಂದು ಅವರು ತಿಳಿಸಿದರು.
ಜನಜೀವನ,ಸಂಸ್ಕೃತಿ,ಕಾಲ ಘಟ್ಟಗಳ ಸಮಗ್ರ ನೋಟಗಳನ್ನು ಲಿಪಿಗಳ ಮೂಲಕ ದಾಖಲೀಕರಿಸಿದಾಗ ಮುಂದಿನ ತಲೆಮಾರಿಗೆ ಐತಿಹಾಸಿಕ ಸ್ಪಷ್ಟತೆಗಳು ಗೊಂದಲ ರಹಿತವಾಗಿ ಲಭ್ಯವಾಗುತ್ತದೆ.ಆಯಾ ಭಾಷೆಗಳ ಈ ನಿಟ್ಟಿನ ಹಿನ್ನೆಲೆಗಳು ಮೊದಲಿಗೆ ಅದೇ ಭಾಷೆಯಲ್ಲಿ ದಾಖಲೀಕರಣಗೊಳಿಸುವುದು ಪಾರಂಪರಿಕ ಸೊಗಡನ್ನು ಉಳಿಸುವಲ್ಲಿ ಸಹಕಾರಿಯಾಗುತ್ತದೆಯೆಮದು ತಿಳಿಸಿದ ಅವರು ಬದಿಯಡ್ಕದ ಕೋ-ಓಪರೇಟಿವ್ ಕಾಲಜಿನ ಆಸಕ್ತ ತುಳು ಲಿಪಿ ಕಲಿಕೆಗೆ ಮುಂದೆ ಬಂದ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.
ಬದಿಯಡ್ಕ ಕೋ-ಓಪರೇಟಿವ್ ಕಾಲೇಜಿನ ಪ್ರಾಂಶುಪಾಲ ಶಿವದಾಸ್ ಸಿ.ಎಚ್ ಅಧ್ಯಕ್ಷತೆ ವಹಿಸಿದ್ದರು.ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕಿನ ಬದಿಯಡ್ಕ ಶಾಖಾ ಪ್ರಬಂಧಕ ಉಮೇಶ್ ರೈ ಕಡಾರು,ಪೆರಡಾಲ ಜಿ.ಬಿ.ಯು.ಪಿ.ಶಾಲಾ ಮುಖ್ಯೋಪಾಧ್ಯಾಯ ಗುರುಮೂರ್ತಿ ನಾಯ್ಕಾಪು,ತುಳು ಸಾಹಿತಿ,ಸಂಘಟಕ ಶ್ರೀನಿವಾಸ ಆಳ್ವ ಕಳತ್ತೂರು,ತುಳು ಲಿಪಿ ಕಲಿಕಾ ಸಂಪನ್ಮೂಲ ವ್ಯಕ್ತಿಗಳಾದ ಜಿ.ವಿ.ಎಸ್ ಉಳ್ಳಾಲ್,ವಿದ್ಯಾಶ್ರೀ ಎಸ್ ಶೆಟ್ಟಿ,ವಿಶ್ವ ತುಳುವೆರೆ ಆಯನೊ ಸಮಿತಿ ಎಣ್ಮಕಜೆ ಪಂಚಾಯತ್ ಸಮಿತಿ ಅಧ್ಯಕ್ಷ ಚಂದ್ರಶೇಖರ ಪೆರ್ಲ,ಪ್ರಭಾವತಿ ಕೆದಿಲಾಯ ಪುಂಡೂರು,ಬದಿಯಡ್ಕ ತುಳುವೆರೆ ಆಯನೊ ಕೂಟದ ಕಾರ್ಯದರ್ಶಿ ನಿರಂಜನ ರೈ ಪೆರಡಾಲಗುತ್ತು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ವಿಶ್ವ ತುಳುವೆರೆ ಅಯನೊದ ದೈವಾರಾಧನ ಸಮಿತಿ ಸಂಚಾಲಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೋ-ಓಪರೇಟಿವ್ ಕಾಲೇಜಿನ ಉಪನ್ಯಾಸಕ ಚಂದ್ರಶೇಖರ ಏತಡ್ಕ ಸ್ವಾಗತಿಸಿ,ತುಳುವೆರೆ ಆಯನೊ ಸಮಿತಿಯ ಜೊತೆ ಕಾರ್ಯದರ್ಶಿ ಗುರುಪ್ರಸಾದ್ ರೈ ವಂದಿಸಿದರು.ತುಳುವೆರೆ ಆಯನೊ ಕೂಟದ ಸಂಚಾಲಕ ಹರ್ಷ ರೈ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.
ದಿನಪೂರ್ತಿ ನಡೆದ ತುಳು ಲಿಪಿ ಕಾರ್ಯಾಗಾರದಲ್ಲಿ ಬದಿಯಡ್ಕದ ಕೋ-ಓಪರೇಟಿವ್ ಕಾಲೇಜಿನ ವಿದ್ಯಾರ್ಥಿಗಳ ಸಹಿತ ಎಪ್ಪತ್ತೈದಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.ತುಳು ಭಾಷೆ,ಲಿಪಿಗಳ ತರಬೇತಿ ನೀಡುವುದರಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುವ ದಂಪತಿಗಳಾದ ಜಿ.ವಿ.ಎಸ್ ಉಳ್ಳಾಲ್ ಹಾಗೂ ವಿದ್ಯಾಶ್ರೀ ಎಸ್ ಶೆಟ್ಟಿ ಶಿಬಿರಾರ್ಥಿಗಳಿಗೆ ಲಿಪಿ ಕಲಿಕೆಯ ತರಬೇತಿ ನೀಡಿದರು.
Click this button or press Ctrl+G to toggle between Kannada and English