ಮಂಗಳೂರು: ಪ್ರಸ್ತುತ ತುಳುನಾಡಿನಲ್ಲಿ ತುಳು ಚಿತ್ರಕ್ಕೆ ಬೇಡಿಕೆ ಹೆಚ್ಚುತ್ತಿರುವ ಜತೆಗೆ ತುಳು ಚಿತ್ರಗಳ ಸಂಖ್ಯೆಯೂ ಅಧಿಕಗೊಳ್ಳುತ್ತಿದೆ. ಇದರ ಬೆನ್ನಲೇ ಇದೀಗ ಸ್ಯಾಂಡಲ್‌ವುಡ್‌ನ “ಲೂಟಿ’ ಎಂಬ ಕನ್ನಡ ಚಿತ್ರದಲ್ಲಿ ಎರಡು ತುಳು ಹಾಡು ಬಳಸಿಕೊಂಡಿರುವುದು ವಿಶೇಷವೆನಿಸಿದೆ.
ಈ ಕುರಿತು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಚಿತ್ರದ ನಿರ್ಮಾಪಕ ನಿರಂಜನ್ ಎನ್.ಎಂ., ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, “ಖುಷಿ’, “ಕೊಡಿ ತೆಲಿಕೆ ಬಳ್ಳಿ ಯಾನ್’ ಎಂಬ 2 ಹಾಡುಗಳು ತುಳುವಿನಲ್ಲಿದೆ. ತುಳುನಾಡನ್ನು ಹೊರತುಪಡಿಸಿ ಉಳಿದೆಡೆ “ಲೂಟಿ’ ಪ್ರದರ್ಶನದ ವೇಳೆ ಕನ್ನಡ ಹಾಡನ್ನೇ ಬಳಸಲಾಗುತ್ತದೆ ಎಂದರು.
ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಕನ್ನಡ ಚಿತ್ರವೊಂದರಲ್ಲಿ ತುಳು ಹಾಡು ಬಳಸಿಕೊಳ್ಳಲಾಗುತ್ತಿದೆ. ಕುಡ್ಲದ ಜನರ ಮೇಲಿನ ಅಭಿಮಾನದಿಂದ ತುಳು ಹಾಡು ಬಳಸಿದ್ದೇವೆ. ಸುಮಾರು 3.5 ಕೋ. ರೂ. ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಆಗಸ್ಟ್ ಕೊನೆ ವಾರದಲ್ಲಿ ಬಿಡುಗಡೆಗೊಳ್ಳುತ್ತಿದೆ ಎಂದು ಹೇಳಿದರು.
ಹೈದರಾಬಾದ್ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ನಟಿ ಇಷಾ ಕೋಪ್ಲಿಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಾಧು ಕೋಕಿಲ, ದಿಲೀಪ್, ಧ್ರುವ, ಶ್ವೇತಾ ಪಂಡಿತ್, ಪಿ. ಜಯಶ್ರೀ ತಾರಾಂಗಣದಲ್ಲಿದ್ದಾರೆ ಎಂದು ವಿವರಿಸಿದರು.
ಸಾಹಿತಿ ವಿ. ಮನೋಹರ್ ಮಾತನಾಡಿ, ಇಂದು ತುಳು ಚಿತ್ರರಂಗ ಉತ್ತಮ ರೀತಿಯಲ್ಲಿ ಬೆಳೆಯುತ್ತಿದ್ದು, ತುಳುವಿನಲ್ಲಿಯೂ ಸ್ಟಾರ್ ಕಲಾವಿದರು ಹುಟ್ಟಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರದಲ್ಲೂ ತುಳು ಹಾಡುಗಳು ಸ್ಥಾನ ಪಡೆದಿರುವುದು ವಿಶೇಷ. “ಲೂಟಿ’ ಚಿತ್ರಕ್ಕೆ ತುಳು ಹಾಡು ಬರೆಯಲು ಹೆಮ್ಮೆ ಎನಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಗಿರೀಶ್ ಕಂಪ್ಲಾಪುರ್, ಸಂಗೀತ ನಿರ್ದೇಶಕ ಧರ್ಮವಿಶ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English