ಮೈಸೂರು: ಅಕಾಲಿಕ ಮರಣಕ್ಕೆ ತುತ್ತಾದ ಸಿಎಂ ಪುತ್ರ ರಾಕೇಶ್ ಅವರ ಅಂತಿಮ ಸಂಸ್ಕಾರ ಮೈಸೂರು ತಾಲೂಕಿನ ಟಿ. ಕಾಟೂರಿನ ಫಾರಂಹೌಸ್‌ನಲ್ಲಿ ಸೋಮವಾರ ಸಂಜೆ ಹಾಲುಮತ ಸಂಪ್ರದಾಯದಂತೆ ನೆರವೇರಿತು. ದಸರಾ ವಸ್ತು ಪ್ರದರ್ಶನ ಆವರಣದಿಂದ ಫಾರಂ ಹೌಸ್‌ಗೆ ಪಾರ್ಥಿವ ಶರೀರವನ್ನು ತರಲಾಯಿತು. ಸಮಾಧಿಗೆ ಉಪ್ಪು, ವಿಭೂತಿ, ಬಿಲ್ವಪತ್ರೆ, ಅರಿಶಿಣ, ಕುಂಕುಮ ಹಾಕಿ ಪೂಜೆ ಸಲ್ಲಿಸಲಾಯಿತು. ರಾಕೇಶ್ ಅವರ ಬಾಯಿಗೆ ರುದ್ರಾಕ್ಷಿ ಹಾಕಲಾಯಿತು.
ಅಕಾಲಿಕ ಮರಣ ಉಂಟಾಗಿರುವುದರಿಂದ ಅಷ್ಟ ದಿಕ್ಕುಗಳಿಗೂ ದಿಗ್ಬಂಧನ ಹಾಕಿ, ಮಂತ್ರಾಕ್ಷತೆ, ಅಂಕುರಾರ್ಪಣೆ ನೆರವೇರಿಸಿ ಎಂಟು ದಿಕ್ಕಿನಲ್ಲಿಯೂ ತಾಮ್ರದ ತಗಡನ್ನು ಇರಿಸಿ, ದೀಪ ಬೆಳಗಿ, ಪೂಜಿಸಲಾಯಿತು. ಅನಂತರ ಪಾರ್ಥಿವ ಶರೀರವನ್ನು ಸಮಾಧಿಯ ಗುಂಡಿಯೊಳಗಿಟ್ಟು ಮಣ್ಣು ಮಾಡಲಾಯಿತು. ಈ ವೇಳೆ, ಮಗನ ಚಟ್ಟಕ್ಕೆ ಸ್ವತಃ ಸಿದ್ದರಾಮಯ್ಯ ಹೆಗಲು ಕೊಟ್ಟು ಹಿಡಿಮಣ್ಣು ಹಾಕಿದರು.
ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಅಂತಿಮ ವಿಧಿ ನೆರವೇರಿದವು. ರಾಕೇಶ್ ಹಿರಿಯ ಪುತ್ರ ಧವನ್ ಅಂತ್ಯಸಂಸ್ಕಾರ ನೆರವೇರಿಸಿದರು.
ಅಂತಿಮ ದರ್ಶನಕ್ಕೆ ಗಣ್ಯರ ದಂಡು
ರಾಕೇಶ್‌ರ ಅಂತಿಮ ದರ್ಶನಕ್ಕೆ ಗಣ್ಯರ ದಂಡೇ ಹರಿದು ಬಂದಿತ್ತು. ರಾಜ್ಯಪಾಲ ವಜುಭಾಯಿ ವಾಲಾ, ವಿಧಾನಸಭೆ ಸ್ಪೀಕರ್ ಕೆ.ಬಿ. ಕೋಳಿವಾಡ, ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ್ ಸಿಂಗ್, ಊಮ್ಮನ್ ಚಾಂಡಿ, ಎಸ್.ಎಂ. ಕೃಷ್ಣ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಎಂ. ವೀರಪ್ಪ ಮೊಲಿ, ಆಸ್ಕರ್ ಫೆರ್ನಾಂಡಿಸ್, ಜಗದೀಶ್ ಶೆಟ್ಟರ್, ಡಿ.ವಿ. ಸದಾನಂದಗೌಡ, ಕೆ.ಎಸ್.ಈಶ್ವರಪ್ಪ, ಕೆ.ಎಚ್.ಮುನಿಯಪ್ಪ, ಡಾ| ಜಿ. ಪರಮೇಶ್ವರ್, ಡಿ.ಕೆ.ಶಿವಕುಮಾರ್, ಡಾ| ಎಚ್.ಸಿ.ಮಹದೇವಪ್ಪ, ಎಚ್.ಎಸ್. ಮಹದೇವ ಪ್ರಸಾದ್, ಯು.ಟಿ. ಖಾದರ್, ಪ್ರಮೋದ್ ಮಧ್ವರಾಜ್, ಉಮಾಶ್ರೀ, ಎಚ್.ವೈ. ಮೇಟಿ, ಕಾಗೋಡು ತಿಮ್ಮಪ್ಪ, ಪ್ರಿಯಾಂಕ ಖರ್ಗೆ, ಎಂ.ಆರ್. ಸೀತಾರಾಂ, ರಮೇಶ್ ಕುಮಾರ್, ರಮಾನಾಥ್ ರೈ, ತನ್ವೀರ್ ಸೇಠ್, ಎಚ್.ಕೆ. ಪಾಟೀಲ್, ಶರಣ ಪ್ರಕಾಶ ಪಾಟೀಲ್, ಐವನ್ ಡಿ’ಸೋಜಾ, ಹಲವು ಶಾಸಕರು, ನಟ ದರ್ಶನ್, ಶಶಿಕುಮಾರ್, ವಾಟಾಳ್ ನಾಗರಾಜ್, ನಟಿ ಜಯಮಾಲ, ಸುತ್ತೂರು ಮಠಾಧೀಶ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಆಗಮಿಸಿ ಸಿದ್ದುಗೆ ಸಾಂತ್ವನ ಹೇಳಿದರು.
Click this button or press Ctrl+G to toggle between Kannada and English