ಉಳ್ಳಾಲ: ಆರ್ಕಿಟೆಕ್ಟ್ ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಕೌಶಲ ಹೆಚ್ಚಿಸಲು ಸ್ಪೆಕ್ಟಾ-16 ರಂತಹ ಕಾರ್ಯಕ್ರಮ ಪೂರಕವಾಗಿದ್ದು, ಮುಂದಿನ ದಿನಗಳಲ್ಲಿ ಪರಿಸರಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದ ಉಪಕುಲಾಧಿಪತಿ ವಿಶಾಲ್ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆ ಪಾನೀರು ಕ್ಯಾಂಪಸ್ಸಿನಲ್ಲಿರುವ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್ ಆಯೋಜಿಸಿದ್ದ ಸ್ಪೆಕ್ಟಾ-16 ವಾಸ್ತುಶಿಲ್ಪ ವಿದ್ಯಾರ್ಥಿಗಳ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಾಸ್ತುಶಿಲ್ಪಿಗಳಿಗೆ ವಿಶ್ವಾದ್ಯಂತ ವಿಫುಲ ಅವಕಾಶವಿದೆ. ತಮ್ಮ ಶೈಕ್ಷಣಿಕ ಜೀವನದಲ್ಲಿ ಹೊಸ ಚಿಂತನೆಗಳೊಂದಿಗೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಅವರು ಹೇಳಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ರಮಾನಂದ ಶೆಟ್ಟಿ ಮಾತನಾಡಿ, ಹೊಸ ಕಲ್ಪನೆಗಳನ್ನು ಸಾಕಾರ ಮಾಡಲು ಆರ್ಕಿಟೆಕ್ಟ್ ಶಿಕ್ಷಣದಲ್ಲಿ ಹಲವು ಅವಕಾಶಗಳಿವೆ. ಇಂತಹ ಕಾರ್ಯಕ್ರಮಗಳ ಮೂಲಕ ಒಂದು ವಿಷಯದ ಕುರಿತ ಸಮಗ್ರ ತರಬೇತಿಯನ್ನು ನಿಟ್ಟೆ ವಿಶ್ವವಿದ್ಯಾನಿಲಯ ಪ್ರಥಮ ವರ್ಷದಲ್ಲಿ ನೀಡುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕೌಶಲ ವೃದ್ಧಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಇದೇ ಸಂದರ್ಭ ಗೋದ್ರೆಜ್ ಸಂಸ್ಥೆಯ ವಿವಿಧ ಲಾಕರ್‌ಗಳ ಪ್ರದರ್ಶನ ಇರುವ 8 ಕೋಟಿ ರೂ. ವೆಚ್ಚದ ಹವಾನಿಯಂತ್ರಿತ ಬಸ್ಸಿಗೆ ಚಾಲನೆ ನೀಡಲಾಯಿತು.
ನಿಟ್ಟೆ ವಿ.ವಿ. ಕುಲಸಚಿವ ಪ್ರೊ| ಎಂ.ಎಸ್. ಮೂಡಿತ್ತಾಯ, ಗೋದ್ರೆಜ್ ಕಂಪೆನಿಯ ಮಾರುಕಟ್ಟೆ ಮುಖ್ಯಸ್ಥ ರಾಕೇಶ್ ಕಾಮತ್, ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್‌ನ ಮುಖ್ಯಸ್ಥ ವಿನೋದ್ ಅರನ್ಹಾ ಮುಖ್ಯ ಅತಿಥಿಗಳಾಗಿದ್ದರು. ನಿಹಾಲ್ ಕಾರ್ಯಕ್ರಮ ನಿರ್ವಹಿಸಿದರು. ಇಫ್ರಾ ಸ್ವಾಗತಿಸಿದರು. ನಿಖೀತಾ ಮಾನ್ವಿ ವಂದಿಸಿದರು.
Click this button or press Ctrl+G to toggle between Kannada and English