ಮಂಗಳೂರು: ದೇಶದಲ್ಲಿ 2012ರಿಂದ 2014ರವರೆಗೆ 614 ಮಂದಿ ಪೊಲೀಸರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆತಂಕಕಾರಿ ವರದಿಯೊಂದು ಬಂದಿದೆ.
2012ರಲ್ಲಿ 214 ಮಂದಿ, 2013 ರಲ್ಲಿ 235 ಹಾಗೂ 2014ರಲ್ಲಿ 165 ಮಂದಿ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಲೋಕಸಭೆಯ ಮುಂಗಾರು ಅಧಿವೇಶದಲ್ಲಿ ಪೊಲೀಸರು ಆತ್ಮಹತ್ಯೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಜನಾಥ್ ಸಿಂಗ್, ಕೇಂದ್ರ ಅಪರಾಧ ದಾಖಲೆಗಳ ಬ್ಯೂರೊ ಅಂಕಿ-ಅಂಶಗಳ ಆಧಾರದಲ್ಲಿ ಈ ಮಾಹಿತಿ ನೀಡಲಾಗಿದೆ. ಪೊಲೀಸರ ಆತ್ಮಹತ್ಯೆ ಕಾರಣಗಳನ್ನು ತಿಳಿಯಲು ಬ್ಯೂರೊ ಆಫ್ ಪೊಲೀಸ್ ರೀಸರ್ಚ್ ಅಂಡ್ ಡೆವಲಪ್‍ಮೆಂಟ್ 2004ರಲ್ಲಿ ನಡೆಸಿದ ಅಧ್ಯಯನದಲ್ಲಿ, ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಳ್ಳಲು ಕೆಲಸದ ಒತ್ತಡ ಮುಖ್ಯ ಕಾರಣ ಎಂದು ಹೇಳಿತ್ತು. ಇದಕ್ಕೆ ಪರಿಹಾರ ಮಾರ್ಗಗಳನ್ನೂ ಸೂಚಿಸಿತ್ತು ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಅತ್ಯಧಿಕ ಅಂದರೆ ಮೂರು ವರ್ಷಗಳಲ್ಲಿ 116 ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 104 ಪೊಲೀಸರು ಆತ್ಮಹತ್ಯೆ ಮಾಡಿಕೊಂಡ ಮಹಾರಾಷ್ಟ್ರ ಎರಡನೇ ಸ್ಥಾನಲ್ಲಿದೆ. ಕರ್ನಾಟಕದಲ್ಲಿ ಈ ಅವಧಿಯಲ್ಲಿ 39 ಮಂದಿ ಪೊಲೀಸರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಂಕಿ-ಅಂಶ ನೀಡಿದ್ದಾರೆ. ಉತ್ತರಾಖಂಡದಲ್ಲಿ ಮಾತ್ರ ಮೂರೂ ವರ್ಷಗಳಲ್ಲಿ ಯಾವ ಪೊಲೀಸರೂ ಆತ್ಮಹತ್ಯೆ ಮಾಡಿಕೊಂಡಿಲ್ಲ.
ಅಂತೆಯೇ ಅಹ್ಮದಾಬಾದ್‍ನ ಐಐಎಂ 2012ರಲ್ಲಿ ಬಿಎಸ್‍ಎಫ್ ಹಾಗೂ ಸಿಆರ್‍ಪಿಎಫ್ ಸಿಬ್ಬಂದಿಯ ಆತ್ಮಹತ್ಯೆ ಬಗ್ಗೆ ಅಧ್ಯಯನ ಕೈಗೊಂಡಿತ್ತು. ಆದರೆ ಬಹುತೇಕ ಸಿಬ್ಬಂದಿಯ ಆತ್ಮಹತ್ಯೆಗೆ ವೈಯಕ್ತಿಕ ಸಮಸ್ಯೆಗಳು ಅಥವಾ ಅನಾರೋಗ್ಯ ಕಾರಣ ಎಂದು ಇದು ಪಟ್ಟಿ ಮಾಡಿತ್ತು ಎಂದು ಹೇಳಿದ್ದಾರೆ.
ಪೊಲೀಸ್ ವ್ಯವಸ್ಥೆ ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿ ಬರುವುದರಿಂದ ಕೇಂದ್ರ ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಅದಾಗ್ಯೂ ಪೊಲೀಸರ ಕರ್ತವ್ಯದ ಸ್ಥಿತಿಗತಿ ಸುಧಾರಿಸಲು ಪೂರಕ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಪೊಲೀಸ್ ಠಾಣೆಗಳಲ್ಲಿ ಮೂಲ ಸೌಕರ್ಯ ಉನ್ನತೀಕರಿಸಲು ಕೇಂದ್ರ ಸರ್ಕಾರ ನೆರವು ನೀಡುತ್ತಿದ್ದು, ಪೊಲೀಸ್ ಪಡೆಯ ಆಧುನೀಕರಣಕ್ಕೆ ಒತ್ತು ನೀಡಲು ರಾಜ್ಯಗಳಿಗೆ ನೆರವು ನೀಡಲಾಗುತ್ತಿದೆ ಎಂದಿದ್ದಾರೆ.
Click this button or press Ctrl+G to toggle between Kannada and English