ಮಂಜೇಶ್ವರ: ಬಹು ನಿರೀಕ್ಷಿತ ತಿರುವನಂತಪುರ- ಕಣ್ಣೂರು ರೈಲನ್ನು ಮಂಗಳೂರಿಗೆ ವಿಸ್ತರಿಸಲು ಕರ್ನಾಟಕ ಸರಕಾರ ಮುತುವರ್ಜಿ ವಹಿಸಬೇಕೆಂದು ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್‌ರವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಇತ್ತಿಚೇಗೆ ಕಾಸರಗೋಡಿಗೆ ಆಗಮಿಸಿದ ಸಚಿವ ರೋಶನ್ ಬೇಗ್‌ರವರನ್ನು ನಿಯೋಗವೊಂದು ಭೇಟಿ ಮಾಡಿ ಈ ಬಗ್ಗೆ ಮನವಿಯನ್ನು ಸಲ್ಲಿಸಲಾಯಿತು. ಈಗಾಗಲೇ ತಿರುವನಂತಪುರ – ಕಣ್ಣೂರು ವೇಗ ರೈಲ್ವೇ ಹಳಿ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಂಡಿದ್ದು, ಇದರಿಂದ ಕಾಸರಗೋಡು ಜಿಲ್ಲೆಯನ್ನು ಹೊರತುಪಡಿಸಲಾಗಿದೆ. ಪ್ರಸ್ತುತ ಯೋಜನೆಯನ್ನು ಮಂಗಳೂರಿನ ತನಕ ವಿಸ್ತರಿಸಿದರೆ ಕಾಸರಗೋಡಿಗೂ ಈ ಸೌಲಭ್ಯ ದೊರೆತಂತಾಗುತ್ತದೆ.
ಮಂಗಳೂರು ಅತ್ಯಂತ ವೇಗದಿಂದ ಬೆಳೆಯುವ ಕೈಗಾರಿಕಾ ನಗರವಾಗಿದೆ. ಅತ್ಯಧಿಕ ಸಂಖ್ಯೆಯಲ್ಲಿ ಕೇರಳೀಯರು ವಾಸಿಸುವ ಹಾಗೂ ಸಂದರ್ಶಿಸುವ ಪ್ರದೇಶವೆಂಬ ಹಿನ್ನೆಲೆಯಲ್ಲಿ ವೇಗ ಹಳಿ ಮಂಗಳೂರು ತನಕ ವಿಸ್ತರಿಸುವುದು ಅತೀ ಆಗತ್ಯವಾಗಿದೆ.
ಪ್ರಸ್ತುತ ತಿರುವನಂತಪುರದಿಂದ ಕಣ್ಣೂರು ತನಕ ಮಾತ್ರ ವೇಗ ಹಳಿ ನಿರ್ಮಾಣ ಯೋಜನೆ ಆರಂಭಿಸಲು ತೀರ್ಮಾನಿಸಲಾಗಿದ್ದು, ಇದನ್ನು ಮಂಗಳೂರು ತನಕ ಮುಂದುವರಿಸಲು ದೆಹಲಿ ಮೆಟ್ರೋ ರೈಲ್ವೇ ಕಾರ್ಪೋರೇಶನ್ ( ಡಿಎಂಆರ್‌ಸಿ) ಸಾಧ್ಯತಾ ಅಧ್ಯಯನಕ್ಕೆ ಸಿದ್ಧತೆ ಆರಂಭಿಸಿತ್ತು. ಆದರೆ ಇದರೊಂದಿಗೆ ಸಹಕರಿಸಲು ಕರ್ನಾಟಕ ಸರಕಾರ ಆಸಕ್ತಿ ತೋರಿಸಲಿಲ್ಲವೆಂದು ಡಿಎಂಆರ್‌ಸಿ ಪ್ರಧಾನ ಅಭಿಯಂತರ ಇ.ಶ್ರೀಧರನ್ ತಿಳಿಸಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ಈ ಯೋಜನೆಯನ್ನು ಮಂಗಳೂರಿಗೆ ವಿಸ್ತರಿಸಲು ಕರ್ನಾಟಕ ಸರಕಾರ ಮುಂಚೂಣಿ ವಹಿಸಬೇಕೆಂದು ಆಗ್ರಹಿಸಿ ಮನವಿಯನ್ನು ಸಲ್ಲಿಸಲಾಯಿತು.
ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಅನಿವಾಸಿ ಉದ್ಯಮಿ ಯಾಹ್ಯಾ ತಳಂಗರೆ, ಮುಸ್ಲಿಂ ಲೀಗ್ ಮುಖಂಡ ಅಬ್ದುಲ್ ರಹ್ಮಾನ್ , ಯುವ ಕಾಂಗ್ರೆಸ್ ಮುಖಂಡ ಸಲೀಂ ಉಳ್ಳಾಲ, ನಾಸರ್ ಮೊಗ್ರಾಲ್, ಪತ್ರಕರ್ತ ಶಾಫೀ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English