ಪುತ್ತೂರು: ಕ್ಷೇತ್ರದ ರಸ್ತೆ ನಿರ್ವಹಣೆಗೆ 1.31 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಪ್ರತಿ ಜಿ.ಪಂ.ಕ್ಷೇತ್ರಕ್ಕೆ ತಲಾ 10 ಲಕ್ಷ ರೂ. ಮತ್ತು ತಾ.ಪಂ. ಕ್ಷೇತ್ರಕ್ಕೆ 1 ಲಕ್ಷ ರೂ. ಒದಗಿಸುವುದಾಗಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಹೇಳಿದರು.
ತಾ.ಪಂ. ಸಭಾಂಗಣದಲ್ಲಿ ನಡೆದ ಟಾಸ್ಕ್ ಫೋರ್ಸ್ ಕಮಿಟಿ ಸಭೆಯಲ್ಲಿ ಅವರು ಮಾತನಾಡಿದರು. ಜಿ.ಪಂ. ಕ್ಷೇತ್ರಕ್ಕೆ 10 ಲಕ್ಷ ರೂ. ಮೀಸಲಿರಿಸಿದ್ದು, ತಾ.ಪಂ. ಕ್ಷೇತ್ರಕ್ಕೂ ಅನುದಾನ ನೀಡುವಂತೆ ತಾ.ಪಂ. ಸದಸ್ಯರು ಪಕ್ಷಬೇಧ ಮರೆತು ಆಗ್ರಹಿಸಿದರು.
ಜಿ.ಪಂ.ಸದಸ್ಯರಾದ ಶಯನಾ ಜಯಾನಂದ, ಪ್ರಮೀಳಾ ಜನಾರ್ದನ, ಪಿ.ಪಿ.ವರ್ಗೀಸ್, ಅನಿತಾ ಹೇಮನಾಥ ಶೆಟ್ಟಿ ಮೊದಲಾದವರು ರಸ್ತೆ ಅಭಿವೃದ್ಧಿಗೆ ಬೇಕಾದ ಅಗತ್ಯ ಅನುದಾನದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಮಾತನಾಡಿ, ತಾ.ಪಂ. ಸದಸ್ಯರಿಗೆ ಅನುದಾನದ ಕೊರತೆ ಇದೆ ಎಂದರು. ಇದಕ್ಕೆ ಉತ್ತರಿಸಿದ ಶಾಸಕಿ ರಸ್ತೆ ನಿರ್ವಹಣೆಗೆ ಬಂದಿರುವ ಲಭ್ಯ ಅನುದಾನದಲ್ಲಿ ತಾರತಮ್ಯವಾಗದಂತೆ 24 ತಾ.ಪಂ. ಸದಸ್ಯರಿಗೆ ತಲಾ 1 ಲಕ್ಷದಂತೆ 24 ಲಕ್ಷ ರೂ. ಮತ್ತು 6 ಜಿ.ಪಂ.ಕ್ಷೇತ್ರಕ್ಕೆ ತಲಾ 10 ಲಕ್ಷದಂತೆ 60 ಲಕ್ಷ ಮೀಸಲಿರಿಸಲಾಗಿದೆ. ಉಳಿದ ಹಣವನ್ನು ನನ್ನ ವ್ಯಾಪ್ತಿಯ ರಸ್ತೆಗಳಿಗೆ ಬಳಸಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಜಿ.ಪಂ.ಎಂಜಿನಿಯರ್ ರೋಹಿದಾಸ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English