ಮಂಗಳೂರು: ಇಂದಲ್ಲ ನಾಳೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗುತ್ತದೆ ಎಂಬ ಆಶಯದಲ್ಲೇ ಇರುವ ಕರಾವಳಿಯ ತುಳು ಭಾಷೆಗೆ ವಿಕಿಪೀಡಿಯ ಮನ್ನಣೆ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಿದೆ.
ವಿಕಿಪೀಡಿಯ ಫೌಂಡೇಷನ್‍ನ ವ್ಯವಸ್ಥಾಪಕ ನಿರ್ದೇಶಕಿ ಕ್ಯಾಥರಿನ್ ಮಹೆರ್ ಶನಿವಾರ ಪಂಜಾಬಿನ ಚಂಡೀಗಡದಲ್ಲಿ ನಡೆದ ‘ವಿಕಿ ಕಾನ್ಫರೆನ್ಸ್ ಇಂಡಿಯಾ-2016’ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.
ಇದುವರೆಗೆ ಇನ್‍ಕ್ಯುಬೇಟರ್‌ನಲ್ಲಿ ಇದ್ದ ತುಳು ಲಿಪಿಯನ್ನು ಈಗ ಲೈವ್ ಸ್ಥಾನಕ್ಕೆ ತರಲಾಗಿದೆ. ಅಂದರೆ ತುಳು ಜಾನಪದಕ್ಕೆ ಸಂಬಂಧಿಸಿ ಯಾವುದೇ ವಿಷಯ ಟೈಪ್ ಮಾಡಿದರೆ ಸಾಕು. ತಕ್ಷಣ ಸಮಗ್ರ ವಿವರ ಅನಾವರಣಗೊಳ್ಳುತ್ತದೆ.
ಈಗಾಗಲೇ ತುಳು ಭಾಷೆಗೆ ಸಂಬಂಧಿಸಿದ 1,050 ಲೇಖನಗಳು ವಿಕಿಪೀಡಿಯದಲ್ಲಿ ಅಡಕವಾಗಿವೆ. ಸುಮಾರು 200 ಮಂದಿ ಲೇಖನ ಬರೆದಿದ್ದು, 100ಕ್ಕೂ ಅಧಿಕ ಮಂದಿ ತುಳು ಲೇಖನದ ಸಂಪಾದಕರಾಗಿದ್ದಾರೆ. 10ಕ್ಕೂ ಅಧಿಕ ಮಂದಿ ನಿರಂತರ ಲೇಖನ ಅಪ್‍ಲೋಡ್ ಮಾಡುತ್ತಿದ್ದಾರೆ. ಬೆಂಗಳೂರಿನ ಸೆಂಟರ್ ಫಾರ್ ಇಂಟರ್‌ನೆಟ್ ಅಂಡ್ ಭಾರತೀಯ ಭಾಷೆಗಳ ಯೋಜನಾ ವ್ಯವಸ್ಥಾಪಕ ಡಾ. ಯು.ಬಿ.ಪವನಜ ಅವರ ಮಾರ್ಗದರ್ಶನದಲ್ಲಿ ಮಂಗಳೂರಿನ ಉಪನ್ಯಾಸಕ ಡಾ. ವಿಶ್ವನಾಥ ಬದಿಕಾನ ಮತ್ತು ಭರತೇಶ್ ಈ ಮನ್ನಣೆ ದೊರೆಯಲು ಶ್ರಮಿಸಿದ್ದಾರೆ.
2008ರಿಂದ ವಿಕಿಪೀಡಿಯಕ್ಕೆ ತುಳು ಭಾಷೆಯನ್ನು ಸೇರಿಸುವ ಕಾರ್ಯ ಆರಂಭಗೊಂಡಿತ್ತು. ಇದರಲ್ಲಿ ಕನ್ನಡ ಲಿಪಿಯಲ್ಲಿ ತುಳು ಭಾಷೆಯನ್ನು ಬರೆಯಲಾಗಿದೆ. 2014 ಜನವರಿಯಿಂದ ತುಳು ಭಾಷೆಯ ಲೇಖನಗಳನ್ನು ಸೇರಿಸುವ ಕಾರ್ಯಕ್ಕೆ ವೇಗ ಹೆಚ್ಚಿದೆ.
Click this button or press Ctrl+G to toggle between Kannada and English