ಅಪಘಾತಕ್ಕೊಳಗಾದ ಮೃತನ ಅಂಗಾಂಗ ದಾನ ಮಾಡುವ ಮೂಲಕ ಹೃದಯವಂತಿಕೆ ಮೆರೆದ ಪೋಷಕರು

9:41 AM, Wednesday, August 10th, 2016
Share
1 Star2 Stars3 Stars4 Stars5 Stars
(No Ratings Yet)
Loading...

Hardik raj Kottaryಮಂಗಳೂರು: ಅಪಘಾತಕ್ಕೊಳಗಾಗಿ ಮೆದುಳು ನಿಷ್ಕ್ರಿಯವಾಗಿದ್ದ ಯುವಕನೋರ್ವನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮೃತನ ಪೋಷಕರು ಹೃದಯವಂತಿಕೆ ಮೆರೆದಿದ್ದಾರೆ.

ನಗರದ ಹೊರವಲಯದ ಪಚ್ಚನಾಡಿಯ ನಿವಾಸಿ ಬಜರಂಗದಳದ ಸಕ್ರಿಯ ಕಾರ್ಯಕರ್ತ ಹಾರ್ದಿಕ್ ರಾಜ್ ಕೊಟ್ಟಾರಿ (24) ಕಳೆದ ಜುಲೈ 24ರಂದು ಪಚ್ಚನಾಡಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಯುವಕನನ್ನು ನಗರದ ಏ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಕೋಮಾಕ್ಕೆ ಜಾರಿದ್ದ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು.

ಪೋಷಕರು ಅಂಗಾಂಗ ದಾನ ಮಾಡಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಅವರ ಅಂಗಾಂಗಗಳ ಹೊಂದಾಣಿಕೆ ಪರಿಶೀಲನೆ ಕಾರ್ಯ ಸೋಮವಾರ ರಾತ್ರಿ ನಡೆದಿತ್ತು. ತಡರಾತ್ರಿ ಅಂಗ ಹೊರತೆಗೆಯುವ ಕಾರ್ಯ ನಡೆದ ಬಳಿಕ ಮಂಗಳವಾರ ಬೆಳಗ್ಗೆ ಅಂಗಾಂಗಗಳನ್ನು ಬೆಂಗಳೂರು, ಚೆನ್ನೈಗೆ ಕಳುಹಿಸಲಾಗಿದೆ. ಕಾರ್ನಿಯಾವನ್ನು ಎ.ಜೆ. ಆಸ್ಪತ್ರೆಯ ನೇತ್ರ ಬ್ಯಾಂಕ್‍ನಲ್ಲಿರಿಸಿಕೊಳ್ಳಲಾಗಿದ್ದು, ಪಿತ್ತಜನಕಾಂಗವನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಕಿಡ್ನಿ ಹಾಗೂ ಹೃದಯವನ್ನು ಕಳುಹಿಸುವ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ ಎಂದು ತಿಳಿದುಬಂದಿದೆ.

ಈ ನಡುವೆ ಮೊನ್ನೆ ರಾತ್ರಿ ಏ.ಜೆ. ಆಸ್ಪತ್ರೆಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಖಾಸಗಿ ವಿಮಾನ ಮೂಲಕ ಕೆಲವೊಂದು ಅಗಾಂಗಗಳನ್ನು ಬೆಂಗಳೂರಿಗೆ ಸಾಗಿಸಲಾಗಿದೆ. ಈ ವೇಳೆ ರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ಏ.ಜೆ. ಆಸ್ಪತ್ರೆಯಿಂದ ಮಂಗಳೂರು ವಿಮಾನ ನಿಲ್ದಾಣದವರೆಗೆ ಟ್ರಾಫಿಕ್ ಮುಕ್ತ ವಲಯವನ್ನು ಮಂಗಳೂರು ನಗರ ಪೊಲೀಸ್ ಇಲಾಖೆ ಕಲ್ಪಿಸಿಕೊಟ್ಟಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English