ಸೌಜನ್ಯ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯವರ ಕುಟುಂಬದರ ಪಾತ್ರ ಇಲ್ಲ: ಸಿಬಿಐ ವರದಿ

12:16 PM, Wednesday, August 10th, 2016
Share
1 Star2 Stars3 Stars4 Stars5 Stars
(No Ratings Yet)
Loading...

Soujanyaಬೆಂಗಳೂರು: ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯವರ ಕುಟುಂಬದರ ಪಾತ್ರ ಇಲ್ಲವೆಂದು ಸಿಬಿಐ ವರದಿ ಸಲ್ಲಿಸಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪರ ವಕೀಲ ಪಿ.ಪಿ. ಹೆಗ್ಡೆ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡಗಡೆ ಮಾಡಿರುವ ಅವರು, ಈ ಪ್ರಕರಣದಲ್ಲಿ ಆರೋಪಿ ಸಂತೋಷ್‌ ರಾವ್‌ ಕೃತ್ಯ ಎಸೆಗಿರುವುದು ತನಿಖೆಯಿಂದ ಸಾಬೀತಾಗಿದೆ ಎಂದು ಸಿಬಿಎ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಧರ್ಮಾಧಿಕಾರಿ ಅವರ ಕುಟುಂಬ ವರ್ಗದವರಿಗೆ ಕ್ಲೀನ್‌ಚಿಟ್‌ ನೀಡಿದೆ ಎಂದು ತಿಳಿಸಿದ್ದಾರೆ.

ಸಿಬಿಐ ಅಧಿಕಾರಿಗಳು ಸಾಕ್ಷಿದಾರರ ಹೇಳಿಕೆಗಳು, ವೈದ್ಯರ ವರದಿಗಳನ್ನು ವಿಶ್ಲೇಷಿಸಿದಾಗ ಆರೋಪಿ ಸಂತೋಷ ರಾವ್‌ ಕೃತ್ಯ ಎಸಗಿರುವುದು ದೃಢಪಟ್ಟಿದೆ. ಈ ಬಗ್ಗೆ ಚೆನ್ನೈನ ವಿಶೇಷ ಸಿಬಿಐ ಅಧಿಕಾರಿಗಳ ತಂಡದ ತನಿಖಾಧಿಕಾರಿ ಪಿವಿಎಸ್‌ಎನ್‌ ರಾಜು ಅವರು ವಿವರವಾದ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ 44 ಜನ ಸಾಕ್ಷಿದಾರರ ಹೆಸರನ್ನು ಹೆಸರಿಸಲಾಗಿದೆ. ಸಂತೋಷ್‌ ರಾವ್‌ ಹೊರತು ಪಡಿಸಿದರೆ ಬೇರೆ ಯಾವುದೇ ವ್ಯಕ್ತಿಗಳು ಯಾವುದೇ ರೀತಿಯಲ್ಲಿ ಕೃತ್ಯದಲ್ಲಿ ಶಾಮೀಲಾಗಿಲ್ಲ ಎಂಬುದು ಸಿಬಿಐ ವರದಿಯಿಂದ ಸಾಬೀತಾಗಿದೆ ಎಂದು ಹೇಳಿದ್ದಾರೆ.

ಸಿಬಿಐ ಸಲ್ಲಿಸಿದ ಅಂತಿಮ ತನಿಖಾ ವರದಿಯಿಂದಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಕೆಲವೊಂದು ವ್ಯಕ್ತಿಗಳು ಮಾಡಿರುವ ಆರೋಪಗಳು ಸುಳ್ಳು ಎಂದು ಸಾಬೀತಾಗಿದೆ. ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ದುರುದ್ದೇಶದಿಂದ ಕೆಲವೊಂದು ವ್ಯಕ್ತಿಗಳು ಧರ್ಮಸ್ಥಳದ ಧರ್ಮಾಧಿಕಾರಿಗಳ ಕುಟುಂಬದವರ ಮತ್ತು ಇತರರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ತೇಜೋವಧೆ ಮಾಡಿದ್ದಾರೆ. ಧರ್ಮಸ್ಥಳ ಹೆಸರಿಗೆ ಕಳಂಕವನ್ನುಂಟು ಮಾಡಲು ಯತ್ನಿಸುತ್ತಿರುವ ವ್ಯಕ್ತಿಗಳ ಹಿಂದೆ ಕೋಟ್ಯಂತರ ರೂ. ವಿದೇಶಿ ದೇಣಿಗೆ ಹಣ ಪಡೆಯುತ್ತಿರುವ ಸಂಸ್ಥೆಗಳ ಕೈವಾಡ ಇದೆ. ಈ ರೀತಿ ಧರ್ಮಸ್ಥಳ ಧರ್ಮಾಧಿಕಾರಿ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ 2012 ಅ.10ರಂದು ಪ್ರಕರಣ ದಾಖಲಾಗಿತ್ತು. ಆರೋಪಿ ಸಂತೋಷ್‌ ರಾವ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಆರೋಪಿ ಕೊಲೆ ಮತ್ತು ಅತ್ಯಾಚಾರ ಎಸಗಿರುವ ಬಗ್ಗೆ ಮಂಗಳೂರು ಸೆಷನ್ಸ್‌ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದರು. ಈ ಮಧ್ಯೆ, ಪ್ರಕರಣದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಅವರ ಕುಟುಂಬಕ್ಕೆ ಸೇರಿದವರು ಶಾಮೀಲಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.

ಆದರೆ, ಸುಳ್ಳು ಆರೋಪಗಳಿಂದ ಕ್ಷೇತ್ರದ ತೇಜೋವಧೆ ನಡೆಯುತ್ತಿದೆ ಎಂದಿದ್ದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಕರಣದ ತನಿಖೆಯನ್ನು ಉನ್ನತ ತನಿಖಾ ಸಂಸ್ಥೆಗೆ ಒಪ್ಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ಕೋರಿದ್ದರು. ತರುವಾಯ ರಾಜ್ಯ ಸರ್ಕಾರವು 2013ರ ನ.6ರಂದು ತಿಖೆಯನ್ನು ಸಿಬಿಐ ವಹಿಸಿತ್ತು.

ತನಿಖೆ ಕೈಗೊಂಡ ಸಿಬಿಐ ಪೊಲೀಸರು ನಡೆಸಿದ ವಿಚಾರಣೆ ಮತ್ತು ಸಂಗ್ರಹಿಸಿದ್ದ ಸಾಕ್ಷ್ಯಾಧಾರಗಳನ್ನು ಮತ್ತೂಮ್ಮೆ ಸಿಬಿಐ ಪರೀಕ್ಷಿಸಿತ್ತು. ಅಲ್ಲದೆ, ಸ್ಥಳ ಪರೀಶಿಲನೆ ನಡೆಸಿತು. ಎಲ್ಲಾ ರೀತಿಯ ಸಾಕ್ಷ್ಯಾಧಾರಗಳನ್ನು ಪಡೆದು ವಿಸ್ತೃತವಾದ ವರದಿ ನೀಡಿದೆ ಎಂದು ಪಿ.ಪಿ. ಹೆಗ್ಡೆ ತಿಳಿಸಿದ್ದಾರೆ.

ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಸಂತೋಷ್‌ ರಾವ್‌ ಸಲ್ಲಿಸಿದ್ದ ಜಾಮೀನು ಅರ್ಜಿ ಸಿಟಿ ಸಿವಿಲ್‌ ಕೋರ್ಟ್‌ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಕರಣದಲ್ಲಿ ಆರೋಪಿ ಪರ ಸಾಕ್ಷಿಗಳು ಇರುವ ಕಾರಣ ಮತ್ತು ಪ್ರಕರಣವು ಸೂಕ್ಷ¾ತೆಯಿಂದ ಕೂಡಿದ ಕಾರಣ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಮೊರೆ ಹೋಗಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English