ಬದಿಯಡ್ಕ: ದಿ.ಕಯ್ಯಾರ ಕಿಂಞಿಣ್ಣ ರೈಗಳು ಮೂಲದಲ್ಲಿ ಸಾಂಪ್ರದಾಯಿಕ ಕೃಷಿಕನಾಗಿದ್ದುಕೊಂಡು ಅಧ್ಯಾಪಕರಾಗಿ,ಕವಿಯಾಗಿ,ಕನ್ನಡದ ಹೋರಾಟಗಾರರಾಗಿ, ರಾಜಕಾರಣಿಯಾಗಿ ಸಮಾಜದ ವಿವಿಧ ರಂಗಗಳಲ್ಲಿ ಸಲ್ಲಿಸಿದ ಸೇವೆ ಅಪ್ರತಿಮವಾದುದು.
ಅವರ ಬದುಕಿನ ಆದರ್ಶ,ಆಶಯ,ಸಂದೇಶಗಳು ಸಾರ್ವಕಾಲಿಕವಾಗಿದ್ದು ಅನುಸರಣೀಯವೆಂದು ಕವಿ,ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ದಿ.ಕಯ್ಯಾರ ಕಿಂಞಿಣ್ಣ ರೈಗಳ ಪುಣ್ಯ ಸ್ಮರಣೆಯ ದಿನವಾದ ಮಂಗಳವಾರ ಕವಿಯ ನಿವಾಸ ಕವಿತಾ ಕುಟೀರದಲ್ಲಿ ಆಯೋಜಿಸಲಾಗಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕವಿ ಕಯ್ಯಾರರ ಶಿಷ್ಯರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡ ರಾಧಾಕೃಷ್ಣ ಉಳಿಯತ್ತಡ್ಕ ಮುಂದುವರಿದು ಮಾತನಾಡಿ,ಕಯ್ಯಾರರ ಕಲಿಕಾ ಕ್ರಮಗಳು ಉತ್ಕೃಷ್ಟ ಮಟ್ಟದವಾಗಿದ್ದು, ಗಮನವಾದ ಅಧ್ಯಯನ ಮತ್ತು ವಿದ್ಯಾರ್ಥಿಗಳಿಗೆ ಮನನವಾಗುವ ರೀತಿಯಲ್ಲಿ ಮನೋಜ್ಞವಾಗಿ ಬಿಂಬಿಸಲು ರೋಚಕವಾಗಿ ವಾಖ್ಯಾನಿಸುತ್ತಿದ್ದ ಪರಿಯನ್ನು ವಿಶಿಷ್ಟವಾಗಿತ್ತೆಂದು ತಿಳಿಸಿದರು.
ಕವಿ ಕಯ್ಯಾರರು ಶಿಕ್ಷಣಕ್ಕೆ ನೀಡುತ್ತಿದ್ದ ಮಹತ್ವದ ಕಾಳಜಿಯ ಪ್ರತೀಕಗಳಾಗಿ ವಿದ್ಯಾಗಿರಿ ಮತ್ತು ಉದಯಗಿರಿಗಳಲ್ಲಿ ಬಡ ಜನರಿಗೆ ಶಾಲಾ ಶಿಕ್ಷಣ ಲಭ್ಯವಾಗಿಸಲು ಶಾಲೆಗಳನ್ನು ಆರಂಭಿಸಿರುವುದು ಸಾಕ್ಷಿಯಾಗಿದೆ ಎಂದು ಉಪಸ್ಥಿತರಿದ್ದ ನಿವೃತ್ತ ವಿಜಯಾ ಬ್ಯಾಂಕ್ ವಲಯ ಮಹಾಪ್ರಬಂಧಕ ಕಡಾರು ಐತ್ತಪ್ಪ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿ ಕಯ್ಯಾರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್,ಬದಿಯಡ್ಕ ನವಜೀವನ ಫ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಂಕರ ಸಾರಡ್ಕ,ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಉಪಸ್ಥಿತರಿದ್ದು ನುಡಿ ನಮನ ಸಲ್ಲಿಸಿದರು.
ಕಯ್ಯಾರರ ಹಿರಿಯ ಪುತ್ರ ದುರ್ಗಾಪ್ರಸಾದ್ ರೈ ಸ್ವಾಗತಿಸಿ,ಭುವನಪ್ರಸಾದ್ ಹೆಗ್ಡೆ ವಂದಿಸಿದರು.ಕಳ್ಳಿಗೆ ತಾರಾನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English