ಕುಂಬಳೆ: ಭೂ ದಾಖಲೆಗಳ ನೋಂದಾವಣಿ ಮತ್ತು ದಾನಪತ್ರ,ಪಾಲುಪಟ್ಟಿ ಮೊದಲಾದ ಅತ್ಯಾವಶ್ಯಕ ವಿಚಾರಗಳಲ್ಲಿ ನೂತನ ರಾಜ್ಯ ಸರಕಾರ ಅಪರಿಮಿತ ಶುಲ್ಕ ಏರಿಕೆಗೊಳಿಸಿ ಅನ್ಯಾಯವೆಸಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ಸ್ ಉಪಾಧ್ಯಕ್ಷ ಹಕೀಂ ಕುನ್ನಿಲ್ ಟೀಕೆ ವ್ಯಕ್ತಪಡಿಸಿದರು.
ಕುಂಬಳೆ ಬ್ಲಾಕ್ ಕಾಂಗ್ರೆಸ್ಸ್ ಸಮಿತಿಯ ನೇತೃತ್ವದಲ್ಲಿ ಗುರುವಾರ ರಾಜ್ಯ ಸರಕಾರದ ಹೊಸ ಅಪ್ರಬುದ್ದ ಭೂದಾಖಲೆ ನೋಂದಾವಣಿ ಕಾನೂನಿಗೆದುರಾಗಿ ಕುಂಬಳೆ ಸರ್ವೇ ಕಾರ್ಯಾಲಯಕ್ಕೆ ನಡೆಸಿದ ಮಾರ್ಚ್‌ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜನ ಸಾಮಾನ್ಯರಲ್ಲಿ ಕುಟುಂಬದ ಆಸ್ತಿಗಳ ಪಾಲುಮಾಡಿಕೊಳ್ಳುವುದು,ತಂದೆ ಮಕ್ಕಳಿಗೆ ಆಸ್ತಿಯನ್ನು ದಾನಪತ್ರ ಮಾಡಿಕೊಡುವುದು ಮೊದಲಾದವುಗಳಿಗೆ ಹಿಂದಿನ ಯುಡಿಎಫ್ ಸರಕಾರ ಕನಿಷ್ಠ ಒಂದು ಸಾವಿರ ರೂ.ಗಳ ಛಾಪಾ ಕಾಗದ ನಿಗದಿಪಡಿಸಿತ್ತು.ಆದರೆ ಇದೀಗ ಎಲ್‌ಡಿಎಫ್ ಸರಕಾರ ಯಾವುದೇ ಮಾನದಂಡಗಳಿಲ್ಲದೆ ಈ ದಾಖಲಾತಿಗಳ ನೋಂದಾವಣಾ ಶುಲ್ಕಗಳನ್ನು ಏಕಾಏಕಿ ಅನಿಯಂತ್ರಿತವಾಗಿ ಏರಿಕೆ ಮಾಡಿರುವುದು ಜನ ಸಾಮಾನ್ಯರ ಭೂ ವಹಿವಾಟಿನ ಮೇಲೆ ಪ್ರಹಾರ ಮಾಡಿದಂತಾಗಿದೆಯೆಂದು ಅವರು ತಿಳಿಸಿದರು.
ಎಡರಂಗ ಅಧಿಕಾರಕ್ಕೇರಿದರೆ ಎಲ್ಲವೂ ಸರಿಯಾಗುತ್ತದೆಯೆಂಬ ಜನಮರುಳು ಗೊಳಿಸುವ ಜಾಹೀರಾತು ನೀಡಿ ಅಧಿಕಾರಕ್ಕೆ ಬಂದ ಎಡರಂಗ ಇದೀಗ ಜನರಿಗೆ ನೀಡುತ್ತಿರುವುದು ಜನಸಾಮಾನ್ಯರಿಗೆ ಭರಿಸಲಾರದ ಬೆಲೆಯೇರಿಕೆಯ ಕೊಡುಗೆಯಾಗಿದೆ.ಬಡವರಿಗಂತೂ ಭೂ ನೋಂದಾವಣಾ ಕಚೇರಿಯ ಬಳಿ ಸುಳಿಯಲೂ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣಮಾಡಿರುವುದನ್ನು ಕಾಂಗ್ರೆಸ್ಸ್ ರಾಜ್ಯಾದ್ಯಂತ ವಿರೋಧಿಸುತ್ತಿದ್ದು,ಏರಿಕೆಯಾದ ಭೂ ನೋಂದಾವಣಾ ಶುಲ್ಕಗಳನ್ನು ಕಡಿತಗೊಳಿಸುವಲ್ಲಿವರೆಗೆ ಹೋರಾಟದಿಂದ ಹಿಂದಿ ಸರಿಯದೆಂದು ಅವರು ತಿಳಿಸಿದರು.
ಪ್ರಧಾನ ಭಾಷಣಗೈದ ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಕೇಶವಪ್ರಸಾದ ನಾಣಿತ್ತಿಲು ಮಾತನಾಡಿ, ಪ್ರಮಾಣ ವಚನ ಸ್ವೀಕಾರ ಸಮಾರಂಭದ ಜಾಹೀರಾತಿಗಾಗಿ ಕೋಟ್ಯಂತರ ಮೊತ್ತವನ್ನು ವ್ಯರ್ಥಗೊಳಿಸಿರುವ ಪಿಣರಾಯಿ ವಿಜಯನ್,ಸರಕಾರದ ಖಜಾನೆಯಲ್ಲಿ ದುಡ್ಡಿಲ್ಲವೆಂದು ನುಡಿಯುತ್ತಿರುವುದನ್ನು ಯಾರೂ ನಂಬಲು ಸಾಧ್ಯವಿಲ್ಲ.ಪ್ರಮಾಣ ವಚನ ಸ್ವೀಕಾರದ ಬಳಿಕ ಮುಖ್ಯಮಂತ್ರಿ ಜನಸಾಮಾನ್ಯರ ಮುಂದೆ ಈವರೆಗೆ ಕಂಡಿಲ್ಲ.
ದಿನದ 24 ಗಂಟೆಯೂ ಹಿಂದಿನ ಉಮ್ಮನ್ ಚಾಂಡಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳು ಕೇರಳದ ಜನತೆಗೆ ನೇರ ಸಂಪರ್ಕಕ್ಕೆ ಲಭ್ಯವಿದ್ದು ಜನಸಾಮಾನ್ಯರ ಅಹವಾಲುಗಳನ್ನು ಆಲಿಸುವ ವ್ಯವಸ್ಥೆ ಇದೀಗ ಮಾಯವಾಗಿದೆ.ಮಂತ್ರಿ ಮಂಡಲ ತೀರ್ಮಾನ,ಮುಖ್ಯಮಂತ್ರಿಗಳ ಕಚೇರಿ ವ್ಯವಹಾರಗಳ ಬಗ್ಗೆ ಜನರಿಗೆ ಯಾವುದೇ ಮಾಹಿತಿ ಲಭ್ಯವಾಗಬಾರದೆಂಬ ಕಾನೂನು ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.
ಆದರ್ಶ ರಾಜಕಾರಣಿಯೆಂದು ಸ್ವಯಂ ಬಿಂಬಿಸುತ್ತಿರುವ ವಿ.ಎಸ್ ಅಚ್ಚುತಾನಂದನ್ ಇಂದು ಸರಕಾರದ ಹಣವನ್ನು ಕೊಳ್ಳೆಹೊಡೆಯುವ ಸ್ಥಾನದಲ್ಲಿ ವ್ಯಸ್ಥರಾಗಿದ್ದರೆ.ಇಂತಹ ದುಂದುವೆಚ್ಚಗಳನ್ನು ಮಾಡುತ್ತಿರುವ ಎಡರಂಗ ಖಜಾನೆ ಬರಿದೆಂದು ಬೊಬ್ಬಿರಿಯುತ್ತಿರುವುದು ಹಾಸ್ಯಾಸ್ಪದವೆಂದು ನಾಣಿತ್ತಿಲು ಟೀಕಿಸಿದರು.
ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಸಾಮಿಕುಟ್ಟಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಕಾಂಗ್ರೆಸ್ಸ್ ಸಮಿತಿ ಸದಸ್ಯ ಮಂಜುನಾಥ ಆಳ್ವ ಹಾಗೂ ಹಿರಿಯ ಮುಖಂಡ ಎ.ಎ.ಕಯ್ಯಾಂಕುಡೇಲು ದಿಕ್ಸೂಚಿ ಭಾಷಣಗೈದರು.ಬ್ಲಾಕ್ ಕಾಂಗ್ರೆಸ್ಸ್ ಉಪಾಧ್ಯಕ್ಷ ನ್ಯಾ.ಶಿವರಾಮ ಆಳ್ವ,ಐಎನ್‌ಟಿಯುಸಿ ಅಧ್ಯಕ್ಷ ಸುಮಿತ್ ಕುಮಾರ್,ಯುವ ಕಾಂಗ್ರೆಸ್ಸ್ ಬ್ಲಾಕ್ ಕಾರ್ಯದರ್ಶಿ ನಾಸಿರ್ ಮೊಗ್ರಾಲ್,ಕುಂಬಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗೀತಾ ಎಲ್ ಶೆಟ್ಟಿ,ಬ್ಲಾಕ್ ಸಮಿತಿ ಕಾರ್ಯದರ್ಶಿಗಳಾದ ರವಿ.ಪೂಜಾರಿ,ಲೋಕನಾಥ ಶೆಟ್ಟಿ,ಕಮರುದ್ದೀನ್,ನಾರಾಯಣ ಏದಾರ್ ಮೊದಲಾದವರು ಮಾತನಾಡಿದರು.
ಮೋಹನ ರೈ ಕಯ್ಯಾರು ಸ್ವಾಗತಿಸಿ,ಕೇಶವ ದರ್ಬಾರ್‌ಕಟ್ಟೆ ವಂದಿಸಿದರು.
ಪ್ರತಿಭಟನೆಯ ಮೊದಲು ಕುಂಬಳೆ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು.ಮೆರವಣಿಗೆ ನೇತೃತ್ವವನ್ನು ಮುಖಂಡರಾದ ಗಣೇಶ್ ಭಂಡಾರಿ ಕುತ್ತಿಕ್ಕಾರ್,ನಾರಾಯಣ ನಂಬ್ಯಾರ್,ಬಿ.ಎಸ್ ಗಾಂಭೀರ್,ಸುಮಿತ್ರಾ ಕೋಟೆಕ್ಕಾರ್,ವಿಲಾಸಿನಿ ಬಂಬ್ರಾಣ,ಸಲೀಂ ಕಟ್ಟತ್ತಡ್ಕ,ಜನಾರ್ಧನ ನಾಯಕ್,ಬಿ.ತಿಮ್ಮಪ್ಪ,ಲಕ್ಷ್ಮಣ ಪ್ರಭು ಕುಂಬಳೆ,ಸುಧೀರ್ ಪೈ ಕುಂಬಳೆ,ಗುರುಪ್ರಸಾದ್ ಕಾಮತ್,ಅಬ್ದುಲ್ಲ ಕುರೆಡ್ಕ,ಡೋಲ್ಫಿ ಡಿಸೋಜಾ ಮೊದಲಾದವರು ಮೆರವಣಿಗೆಯ ನೇತೃತ್ವ ವಹಿಸಿದ್ದರು.
Click this button or press Ctrl+G to toggle between Kannada and English