ಸಾಂಸ್ಕೃತಿಕ ವೈವಿಧ್ಯತೆ ದೇಶದ ಪ್ರಜಾತಂತ್ರದ ಶಕ್ತಿ : ಸಚಿವ ಇ.ಚಂದ್ರಶೇಖರನ್

10:27 AM, Tuesday, August 16th, 2016
Share
1 Star2 Stars3 Stars4 Stars5 Stars
(No Ratings Yet)
Loading...

E Chandrashekharanಕಾಸರಗೋಡು: ಸ್ವಾತಂತ್ರ್ಯ ಲಭಿಸಿದ ಬಳಿಕ ವಿವಿಧ ಕ್ಷೇತ್ರಗಳಲ್ಲಿ ವಿಶ್ವಕ್ಕೆ ಮಾದರಿಯಾಗಬಲ್ಲ ಸಾಧನೆಯನ್ನು ಸಾಧಿಸಿರುವ ಭಾರತ ಸಮಗ್ರ ಪ್ರಗತಿ ಸಾಧಿಸಲು ಒಗ್ಗಟ್ಟಿನ ಪ್ರಯತ್ನ ಅಗತ್ಯ. ಹಲವು ರಾಷ್ಟ್ರಗಳಲ್ಲಿ ಪ್ರಜಾತಂತ್ರ ವ್ಯವಸ್ಥೆ ನೆಲಕಚ್ಚುತ್ತಿರುವಾಗ ನಮ್ಮ ದೇಶದಲ್ಲಿ ಪ್ರಜಾತಂತ್ರ ಬಲಿಷ್ಠಗೊಳ್ಳುತ್ತಿದೆ. ದೇಶದಲ್ಲಿ ಹಾಸುಹೊಕ್ಕಾಗಿರುವ ಸಾಂಸ್ಕೃತಿಕ ವೈವಿದ್ಯತೆ ಪ್ರಜಾತಂತ್ರಕ್ಕೆ ಬಲ ನೀಡುತ್ತದೆ ಅಲ್ಲದೆ ದೇಶಕ್ಕೆ ಶಕ್ತಿ ತುಂಬುತ್ತಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದರು.

ರಾಷ್ಟ್ರದ 70 ನೇ ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ವಿದ್ಯಾನಗರದ ಮುನ್ಸಿಪಲ್ ಸ್ಟೇಡಿಯಂನಲ್ಲಿ ಸೋಮವಾರ ಬೆಳಿಗ್ಗೆ ಆಯೋಜಿಸಿದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜಾರೋಹಣಗೈದು ವಂದನೆ ಸ್ವೀಕರಿಸಿ ಸಚಿವರು ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಗೈದ ಮಹಾತ್ಮಾರನ್ನು ಸ್ಮರಿಸುವ ಜೊತೆಗೆ ಅವರು ತೋರಿದ ತ್ಯಾಗ ಬಲಿದಾನ ಪ್ರೇರಣೆಯಾಗಬೇಕು. ಸ್ವಾತಂತ್ರ್ಯ ಲಭಿಸಿದ ಬಳಿಕ ದೇಶ ಇಂದು ಅಭಿವೃದ್ಧಿ ಪಥದಲ್ಲಿ ಸಾಗಿದೆ. ವಿಶ್ವವೇ ದೇಶದ ಅಭಿವೃದ್ಧಿ ಬಗ್ಗೆ ನೋಡುತ್ತಿದೆ.

ವಿಶ್ವ ರಾಷ್ಟ್ರಗಳೊಂದಿಗೆ ಸ್ಪರ್ಧಿಸುವ ಹಂತಕ್ಕೆ ನಮ್ಮ ದೇಶ ಅಭಿವೃದ್ಧಿ ಸಾಧಿಸಿದೆ. ವಿಶ್ವದಲ್ಲೇ ನಂ. ವನ್ ಆಗಬೇಕಿದ್ದರೆ ಸರ್ವರೂ ನಿಸ್ವಾರ್ಥದಿಂದ ದುಡಿಯಬೇಕು. ಆಗ ಅಭಿಮಾನ ಪಡುವ ದೇಶವಾಗಿ ಅಭಿವೃದ್ಧಿ ಸಾಧಿಸಲಿದೆ ಎಂದು ಸಚಿವರು ಹೇಳಿದರು.

ನಮ್ಮ ರಾಷ್ಟ್ರೀಯತೆ ಮತ್ತು ಸಾಂಸ್ಕೃತಿಕ ವೈವಿದ್ಯತೆಯನ್ನು ಬರೆದು ಮುಗಿಸುವಂತಹ ಪುಸ್ತಕವಲ್ಲ. ಜಾತ್ಯತೀತ ಮೌಲ್ಯಗಳು, ವೈವಿಧ್ಯತೆಯ ಕುರಿತಾಗಿ ಇನ್ನಷ್ಟು ಬರೆಯಲು ಬಾಕಿಯುಳ್ಳ ಪುಸ್ತಕವಾಗಿದೆ. ಗಡಿ ಆಚೆಗಿನ ಉಗ್ರರನ್ನು ನಮ್ಮ ವೀರ ಯೋಧರು ಸದೆ ಬಡಿಯುತ್ತಿದ್ದಾರೆ. ಆದರೆ ದೇಶದೊಳಗಿನ ಛಿದ್ರ ಶಕ್ತಿಗಳನ್ನು ಹಿಮ್ಮೆಟ್ಟಿಸಲು, ನಮ್ಮ ಸಾಂಸ್ಕೃತಿಕ ವೈವಿಧ್ಯತೆಯೆಂಬ ಆಯುಧಕ್ಕಿಂತ ಬೇರೊಂದರ ಅಗತ್ಯವಿಲ್ಲ. ದೇಶವನ್ನು ವಿಭಜಿಸುವ ಶಕ್ತಿಗಳನ್ನು ಮತ್ತು ಶಿಥಿಲೀಕರಿಸುವ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಪ್ರತಿಯೊಬ್ಬರು ಕಂಕಣ ಬದ್ಧರಾಗಬೇಕೆಂದರು.

ಭಾರತದೊಂದಿಗೇ ಸ್ವಾತಂತ್ರ್ಯ ಪಡೆದ ಹಲವು ರಾಷ್ಟ್ರಗಳಲ್ಲಿ ಜನಾಂಗಿಯ ಗಲಭೆ, ಹಿಂಸೆ ಮತ್ತು ಏಕಾಧಿಪತ್ಯ ಆಡಳಿತದಿಂದ ದೇಶಗಳು ಛಿದ್ರಗೊಳ್ಳುತ್ತಿದೆ. ಆದರೆ ಅದೇ ವೇಳೆ ನಮ್ಮ ದೇಶ ವಿಶ್ವಕ್ಕೆ ಮಾದರಿಯಾಗಿ,ಅತ್ಯದ್ಬುತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನೆಲೆನಿಂತಿದೆಯೆಂದು ಅವರು ತಿಳಿಸಿದರು.

ಕೇರಳಕ್ಕೆ ರಾಜ್ಯಕ್ಕೆ 60 ವರ್ಷ : ಮುಂದಿನ ವರ್ಷ ಕೇರಳ ರಾಜ್ಯಕ್ಕೆ 60 ವರ್ಷ. ಈ ಹಿನ್ನೆಲೆಯಲ್ಲಿ ಗ್ರಾಮ-ನಗರ ಎಂಬ ಅಸಮತೋಲನವನ್ನು ಪರಿಹರಿಸಲು ಕೇರಳ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.ರಾಜ್ಯದ ಆರ್ಥಿಕತೆಯನ್ನು,ಉದ್ಯೋಗ ಸಮಸ್ಯೆಯನ್ನು ನೆನಪಿಸಿದ ಸಚಿವರು ಯುವ ಸಮುದಾಯ ಕ್ರೀಯಾತ್ಮಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಪೂರ್ಣ ಮನೋಸ್ಥೈರ್ಯದಿಂದ ಕೃಷಿ,ಸ್ವ ಉದ್ಯೋಗಗಳಿಗೆ ಮಹತ್ವ ನೀಡಬೇಕೆಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಇ.ದೇವದಾಸನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಥೋಮ್ಸನ್ ಜೋಸ್, ಶಾಸಕರಾದ ಪಿ.ಬಿ.ಅಬ್ದುಲ್ ರಝಾಕ್, ಎನ್.ಎ.ನೆಲ್ಲಿಕುನ್ನು, ಕೆ.ಕುಂಞಿರಾಮನ್, ಎಂ.ರಾಜಗೋಪಾಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಸಬ್ ಕಲೆಕ್ಟರ್ ಮೃಣ್ಮಯಿ ಜೋಷಿ, ಎ.ಡಿ.ಎಂ. ಕೆ.ಅಂಬುಜಾಕ್ಷನ್, ಸ್ವಾತಂತ್ರ್ಯ ಹೋರಾಟಗಾರರಾದ ಕ್ಯಾಪ್ಟನ್ ಕೆ.ಎಂ.ಕೆ.ನಂಬ್ಯಾರ್, ಬ್ಲಾಕ್ ಪಂಚಾಯತ್ ಅಧ್ಯಕ್ಷರುಗಳಾದ ಸಿ.ಎಚ್.ಮುಹಮ್ಮದ್ ಕುಂಞಿ ಚಾಯಿಂಡಡಿ, ಎಂ.ಗೌರಿ. ಡೆಪ್ಯೂಟಿ ಕಲೆಕ್ಟರ್‌ಗಳಾದ ಎಚ್.ದಿನೇಶನ್, ಡಾ.ಪಿ.ಕೆ.ಜಯಶ್ರೀ, ತಹಶೀಲ್ದಾರ್, ಡಿವೈಎಸ್‌ಪಿ, ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು, ಸರಕಾರ ನೌಕರರು, ಸಾರ್ವಜನಿಕರು ಮೊದಲಾದವರು ಭಾಗವಹಿಸಿದರು.

ಸ್ವಾತಂತ್ರ್ಯೋತ್ಸವ ಪರೇಡ್‌ಗೆ ಎ.ಆರ್.ಕ್ಯಾಂಪ್‌ನ ರಿಸರ್ಚ್ ಇನ್ಸ್‌ಪೆಕ್ಟರ್ ಕೆ.ವಿಶ್ವನಾಥನ್ ನೇತೃತ್ವ ನೀಡಿದರು. ಜಿಲ್ಲಾ ಶಸಸ್ತ್ರ ಪಡೆ, ಲೋಕಲ್ ಪೊಲೀಸ್, ಮಹಿಳಾ ಪೊಲೀಸ್, ಅಬಕಾರಿ ದಳ, ಎನ್‌ಸಿಸಿ ಸೀನಿಯರ್, ಜೂನಿಯರ್, ನೇವಲ್ ವಿಂಗ, ಸ್ಕೌಟ್ ಮತ್ತು ಗೈಡ್ಸ್, ಸ್ಟುಡೆಂಟ್ ಪೊಲೀಸ್ ಕೆಡೆಟ್, ಜೂನಿಯರ್ ರೆಡ್‌ಕ್ರಾಸ್, ಬ್ಯಾಂಡ್ ಮೇಳ ಮೊದಲಾದವು ಪರೇಡ್‌ನಲ್ಲಿ ಭಾಗವಹಿಸಿತು. ಜವಾಹರ್ ನವೋದಯ ವಿದ್ಯಾಲಯ, ಸರಕಾರಿ ಹೈಯರ್ ಸೆಕೆಂಡರಿ ಸ್ಕೂಲ್ ಕಾಸರಗೋಡು, ಕಾಸರಗೋಡು ಸರಕಾರಿ ಕಾಲೇಜು, ಪಡನ್ನಕ್ಕಾಡು ನೆಹರು ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜು, ಜಿಎಚ್‌ಎಸ್‌ಎಸ್ ಬಲ್ಲ ಈಸ್ಟ್, ಜಿಎಚ್‌ಎಸ್‌ಎಸ್ ಜೆಮ್ನಾಡ್, ಜಯ್ ಮಾತಾ ಸ್ಕೂಲ್ ಮೊದಲಾದವುಗಳ ಪ್ಲಾಟೂನ್‌ಗಳು ಪರೇಡ್‌ನಲ್ಲಿ ಭಾಗವಹಿಸಿತು.

ಪರವನಡ್ಕ ಮಾದರಿ ಸಹವಾಸ ವಿದ್ಯಾಲಯ, ಚೈತನ್ಯ ಸ್ಕೂಲ್ ಕೂಡ್ಲು, ಜವಾಹರ್ ನವೋದಯ ವಿದ್ಯಾಲಯ, ಕೊಹಿನೂರು ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಿತು.

ಗಣರಾಜ್ಯೋತ್ಸವದಂದು ಪ್ರಕಟಿಸಿದ ಮುಖ್ಯಮಂತ್ರಿಗಳ ಪೊಲೀಸ್ ಮೆಡಲ್ ಮತ್ತು ಅತ್ಯುತ್ತಮ ಪ್ರದರ್ಶನ ನೀಡಿದ ಪ್ಲಾಟೂನ್‌ಗಳಿಗೆ ಟ್ರೋಪಿಗಳನ್ನು ಸಚಿವರು ವಿತರಿಸಿದರು. ಸಶಸ್ತ್ರ ಪತಾಕೆ ದಿನದಂದು ಹೆಚ್ಚಿನ ಸ್ಟಾಂಪ್‌ಗಳನ್ನು ಮಾರಾಟ ಮಾಡಿದ ಸಂಸ್ಥೆಗಳಿಗೆ, ಇಲಾಖೆಗಳಿಗೆ, ಎನ್‌ಸಿಸಿ ಘಟಕಗಳನ್ನು ಪುರಸ್ಕರಿಸಿದರು.

ಪೋಲೀಸ್ ಇನ್ಸ್‌ಪೆಕ್ಟರ್‌ಗಳಾದ ಬಾಬು ಪೆರಿಂಙೋತ್, ಸಿ.ಕೆ.ಸುನಿಲ್ ಕುಮಾರ್, ಸಬ್ ಇನ್ಸ್‌ಪೆಕ್ಟರ್ ಎ.ದಾಮೋದರನ್, ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್‌ಗಳಾದ ಕೆ.ವಿ.ಮುರಳಿ, ಪಿ.ಜಯರಾಜನ್, ಕೆ.ಭಾಸ್ಕರನ್, ಸಿವಿಲ್ ಪೊಲೀಸ್ ಅಧಿಕಾರಿಗಳಾದ ಎ.ರಾಮಚಂದ್ರನ್ ಅವರು ಮುಖ್ಯಮಂತ್ರಿಗಳ ಪೊಲೀಸ್ ಮೆಡಲ್ ಸಚಿವರಿಂದ ಸ್ವೀಕರಿಸಿದರು.

ಪೆರೇಡ್‌ನಲ್ಲಿ ಪೊಲೀಸ್ ವಿಭಾಗದಲ್ಲಿ ಕಾಸರಗೋಡು ಶಸಸ್ತ್ರ ಪಡೆ, ಸೀನಿಯರ್ ಎನ್‌ಸಿಸಿ ವಿಭಾಗದಲ್ಲಿ ನೆಹರು ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜು, ಜೂನಿಯರ್ ಎನ್‌ಸಿಸಿ ವಿಭಾಗದಲ್ಲಿ ರಾಜಾಸ್ ಎಚ್‌ಎಸ್‌ಎಸ್ ನೇವಲ್ ವಿಂಗ್, ಸ್ಕೌಟ್ ವಿಭಾಗದಲ್ಲಿ ಕೇಂದ್ರೀಯ ವಿದ್ಯಾಲಯ ನಂಬರ್ – 2, ಗೈಡ್ ವಿಭಾಗದಲ್ಲಿ ಜವಾಹರ್ ನವೋದಯ ವಿದ್ಯಾಲಯ ಪೆರಿಯ ತಂಡಗಳು ಪ್ರಶಸ್ತಿ ಪಡೆಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English