ಮಂಗಳೂರು: ಕೌಶಲ್ಯಾಭಿವೃದ್ಧಿ ತರಬೇತಿ (ಐಟಿಐ) ಪಡೆದ ಯುವಕರಿಗೆ ಉನ್ನತ ಶಿಕ್ಷಣ ಮುಂದುವರಿಸುವ ನಿಟ್ಟಿನಲ್ಲಿ ಸಮಾನಾಂತರ ಪದವಿ ನೀಡುವ ನಿಯಮ ರೂಪಿಸಲಾಗುತ್ತಿದ್ದು, ಇದಕ್ಕಾಗಿ ವಾರದೊಳಗೆ ಮಾರ್ಗಸೂಚಿ ತಯಾರಾಗಲಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ರಾಜೀವ ಪ್ರತಾಪ್ ರೂಡಿ ತಿಳಿಸಿದ್ದಾರೆ.
ಕೆನರಾ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗುವ ವಿದ್ಯಾರ್ಥಿಗಳು ಐಟಿಐ ತರಬೇತಿ ಪಡೆದ ನಂತರ ಅವರಿಗೆ ಶಿಕ್ಷಣ ಮುಂದುವರಿಸಲು ತೊಡಕುಂಟಾಗುತ್ತದೆ.
ಈಗಾಗಲೇ ದೇಶದಲ್ಲಿ ಐಟಿಐ ಶಿಕ್ಷಣ ಪಡೆದ 1.8 ಮಿಲಿಯನ್ ವಿದ್ಯಾಥರ್ಥಿಗಳಿದ್ದು, ಅವರಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗಿದೆ. ಈ ತೊಡಕು ನಿವಾರಿಸುವ ನಿಟ್ಟಿನಲ್ಲಿ ಅಂತಹ ವಿದ್ಯಾರ್ಥಿಗಳು ರಾಷ್ಟ್ರೀಯ ಮುಕ್ತ ಶಾಲೆಯಲ್ಲಿ ಭಾಷಾ ಪರೀಕ್ಷೆ ಬರೆಯಬೇಕು.
ಅದರಲ್ಲಿ ಉತ್ತೀರ್ಣರಾದವರಿಗೆ ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿಯಂತಹ ಸಮಾನಾಂತರ ಶಿಕ್ಷಣದ ಕ್ರೆಡಿಟ್ ನೀಡಿ, ಬಳಿಕ ಉನ್ನತ ಶಿಕ್ಷಣ ಪಡೆಯಲು ಅವಕಾಶ ನೀಡಲಾಗುವುದು. ಕೈಗಾರಿಕೆಗಳ ಬೇಡಿಕೆಗಳಿಗೆ ತಕ್ಕಂತೆ ಕೌಶಲ್ಯವುಳ್ಳ ಮಾನವ ಸಂಪನ್ಮೂಲಗಳ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಈ ನೂತನ ನಿಯಮವನ್ನು ಜಾರಿಗೆ ತರಲಾಗುತ್ತಿದೆ ಎಂದರು.
ದೇಶದಲ್ಲಿ ಈಗಿನ ಶಿಕ್ಷಣ ವ್ಯವಸ್ಥೆ ಕೇವಲ ವಿದ್ಯೆಯನ್ನು ಮಾತ್ರ ನೀಡುತ್ತಿದೆ. ಕೌಶಲ್ಯವುಳ್ಳ ಯುವ ಜನಾಂಗವನ್ನು ತಯಾರು ಮಾಡುತ್ತಿಲ್ಲ. ದೇಶಾದ್ಯಂತ ಸಾವಿರಾರು ಐಟಿಐಗಳಿದ್ದರೂ ಗುಣಮಟ್ಟದ ಕೌಶಲ್ಯ ಹೊಂದಿರುವ ಮಾನವ ಉತ್ಪನ್ನಗಳು ಸಿಗುತ್ತಿಲ್ಲ. ವಿದೇಶಗಳಲ್ಲಿ ಶೇ.80ರಷ್ಟು ವಿದ್ಯಾರ್ಥಿಗಳು ಕೌಶಲ್ಯ ಅಭಿವೃದ್ಧಿ ತರಬೇತಿಗಳತ್ತ ಆಕರ್ಷಿತರಾಗಿದ್ದರೆ, ಭಾರತದಲ್ಲಿ ಅಷ್ಟೇ ಪ್ರಮಾಣದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಗಮನ ಕೇಂದ್ರೀಕರಿಸಿದ್ದಾರೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಕೆಸಿಸಿಐ ಅಧ್ಯಕ್ಷ ರಾಮ್ ಮೋಹನ್ ಪೈ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English