ಬೆಳ್ತಂಗಡಿ: ದೇಶದಾದ್ಯಂತ ಹಲವಾರು ರಾಜ್ಯಗಳಲ್ಲಿ ಗೋವಿನ ರಕ್ಷಣೆ ಹೆಸರಲ್ಲಿ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ದಲಿತ ವಿರೋಧ ನೀತಿ ಖಂಡಿಸಿ ಬೆಳ್ತಂಗಡಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣಕ್ಕೆ ಕಪ್ಪುಪಟ್ಟಿ ಪ್ರದರ್ಶಿಸಿದರು.
ಸ್ವಾತಂತ್ರ್ಯ ದಿನಾಚರಣೆಯ ಮೆರವಣಿಗೆ ಸಂದರ್ಭ ಮೆರವಣಿಗೆಗೆ ತಡೆ ಮಾಡಿ ಕಪ್ಪು ಬಾವುಟವನ್ನು ಬೆಳ್ತಂಗಡಿ ಸಂತೆಕಟ್ಟೆ ಬಳಿ ಪ್ರದರ್ಶಿಸಿದರು. ಧ್ವಜಾರೋಹಣಕ್ಕೆ ಅಡ್ಡಿಪಡಿಸುವ ಬಗ್ಗೆ ಈ ಮೊದಲೇ ದ.ಸಂ.ಸ ಸರಕಾರಕ್ಕೆ ಎಚ್ಚರಿಕೆ ನೀಡಿತ್ತು.
ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆ ಸೂಕ್ತ ಬಿಗಿ ಬಂದೋಬಸ್ತ್ ಮಾಡಿದ್ದರೂ ದಸಂಸ ಕಾರ್ಯಕರ್ತರು ಬೆಳ್ತಂಗಡಿ ಸಂತೆಕಟ್ಟೆ ಬಳಿ ಸ್ವಾತಂತ್ರ್ಯದ ದಿನದ ಅಂಗವಾಗಿ ನಡೆದ ಮೆರವಣಿಗೆಗೆ ಕಪ್ಪು ಬಾವುಟ ಪ್ರದರ್ಶಿಸಿದರು. ಮೆರವಣಿಗೆಗೆ ತಡೆ ಮಾಡಿದ ದಸಂಸ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಗುಗಡೆಗೊಳಿಸಿದರು.
ದ.ಸಂ.ಸ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ವೆಂಕಣ್ಣ ಕೊಯ್ಯೂರು, ಮೈಸೂರು ವಿಭಾಗ ಸಂಚಾಲಕ ಚಂದು ಎಲ್., ತಾಲೂಕು ಸಂಘಟನಾ ಸಂಚಾಲಕ ನೇಮಿರಾಜ್ , ತಾಪಂ ಸದಸ್ಯ ಓಬಯ್ಯ, ಪುದುವೆಟ್ಟು ಗ್ರಾಪಂ ಅಧ್ಯಕ್ಷೆ ನೀಲಮ್ಮ, ಸದಸ್ಯ ನಾರಾಯಣ, ಉಜಿರೆ ಗ್ರಾಪಂ ಸದಸ್ಯ ಶ್ರೀನಿವಾಸ, ಅಂಡಿಂಜೆ ಗ್ರಾಪಂ ಸದಸ್ಯ ಆನಂದ, ಹೊಸಂಗಡಿ ಗ್ರಾಪಂ ಸದಸ್ಯ ರುಕ್ಮಯ್ಯ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Click this button or press Ctrl+G to toggle between Kannada and English