ಯಾವ ಕಾಲಕ್ಕೂ ಬದಲಾಗದ ಸಂಬಂಧ ಅಣ್ಣ-ತಂಗಿ ಸಂಬಂಧ: ರಕ್ಷಾ ಬಂಧನ

9:11 AM, Thursday, August 18th, 2016
Share
1 Star2 Stars3 Stars4 Stars5 Stars
(No Ratings Yet)
Loading...

Rakshabandhanaಮಂಗಳೂರು: ಕಾಲ ಕಾಲಕ್ಕೆ ಸಂಬಂಧಗಳು ಬದಲಾಗುತ್ತಾ ಹೋಗುತ್ತವೆ. ಆದರೆ ಎಂದಿಗೂ ಬದಲಾಗದ ಸಂಬಂಧ ಅಣ್ಣ-ತಂಗಿ ಅಥವಾ ಅಕ್ಕ-ತಮ್ಮನ ಸಂಬಂಧ. ಇದು ರಕ್ತ ಸಂಬಂಧದಲ್ಲಿ ಇರಬಹುದು ಅಥವಾ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದೇ ಸಂದರ್ಭ ಏರ್ಪಡುವ ಸಂಬಂಧ ಇರಬಹುದು. ಸೋದರ-ಸೋದರಿ ಸಂಬಂಧಗಳು ಸದಾ ಅಜರಾಮರ.

ಒಡಹುಟ್ಟಿದವರಲ್ಲದೆ ಹೊರಗಿನವರನ್ನೂ ಕೂಡ ಸಹೋದರರಂತೆ ಭಾವಿಸಿ ನಡೆದುಕೊಳ್ಳಬೇಕೆಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಹಬ್ಬವೇ ರಾಖಿ ಹಬ್ಬ. ಹಿಂದೆ ಯುದ್ಧಕ್ಕೆ ಹೋಗುವ ತಮ್ಮ ಸಹೋದರ ಮತ್ತು ಊರಿನ ಇತರೆ ಯುವಕರಿಗೆ ಮಹಿಳೆಯರು ರಾಖಿ ಕಟ್ಟಿ ಯುದ್ಧದಲ್ಲಿ ಗೆದ್ದು ಬರುವಂತೆ ಹಾರೈಸಿ ಕಳುಹಿಸುತ್ತಿದ್ದರು. ಇಂದು ಇದು ಸಾಕಷ್ಟು ಬದಲಾವಣೆ ಕಂಡಿದ್ದರೂ ಮೂಲ ಆಶಯವನ್ನು ಬದಲಿಸಿಕೊಂಡಿಲ್ಲ.

ಶ್ರಾವಣ ಮಾಸದ ನೂಲ ಹುಣ್ಣಿಮೆಯನ್ನು ರಕ್ಷಾ ಬಂಧನದ ಹಬ್ಬವನ್ನಾಗಿ ಆಚರಿಸುತ್ತಾ ಬರಲಾಗಿದೆ. ಅಂದು ಸಹೋದರಿಯರು ರಾಖಿಗಳನ್ನು (ರಕ್ಷಾ ಬಂಧನ) ಶ್ರೀ ಕೃಷ್ಣನ ಮುಂದೆ ಇರಿಸಿ ಪೂಜಿಸಿ ಅನವರತ ನಮ್ಮ ಸಹೋದರರನ್ನು ರಕ್ಷಿಸು ಎಂದು ಬೇಡಿಕೊಳ್ಳುತ್ತಾರೆ. ನಂತರ ಸಹೋದರನ ಹಣೆಗೆ ಕುಂಕುಮ, ಅಕ್ಷತೆಗಳನ್ನು ಹಚ್ಚಿ ರಕ್ಷಾ ಬಂಧನವನ್ನು ಕಟ್ಟಿ ಆರತಿ ಮಾಡಿ ಅವರ ಬದುಕಲ್ಲಿ ಯಾವಾಗಲೂ ಸಿಹಿ ತುಂಬಿರಲಿ ಎಂದು ಹಾರೈಸಿ ಸಿಹಿ ತಿನ್ನಿಸುತ್ತಾರೆ. ಸಹೋದರಿಯ ಈ ಪ್ರೀತಿಗೆ ಪ್ರತಿಯಾಗಿ ಸಹೋದರನು ಎಲ್ಲಾ ರೀತಿಯಲ್ಲೂ ರಕ್ಷಿಸುತ್ತೇನೆಂದು ಪುಟ್ಟ ಉಡುಗೊರೆಯೊಂದನ್ನು ನೀಡುವುದು ಈ ಹಬ್ಬದ ವೈಶಿಷ್ಟ್ಯವಾಗಿದೆ.

ಹಿಂದೆ ದ್ವಾಪರ ಯುಗದಲ್ಲಿ ಶ್ರೀಕೃಷ್ಣನು ತನ್ನ ಸಂಬಂಧಿ ಶಿಶುಪಾಲ (ಮಾವ)ನನ್ನು ಸಂಹರಿಸಲು ತನ್ನ ಬೆರಳಿನಲ್ಲಿರುವ ಸುದರ್ಶನ ಚಕ್ರವನ್ನು ಕಳುಹಿಸಿದ್ದನಂತೆ. ಅದು ಹಿಂದಿರುಗುವ ಸಂದರ್ಭದಲ್ಲಿ ಬೆರಳಿಗೆ ಗಾಯವಾಗಿ ರಕ್ತ ಸೋರುತ್ತಿತ್ತಂತೆ. ಅದನ್ನು ಅಲ್ಲೆ ಇದ್ದ ದ್ರೌಪದಿಯು ನೋಡಿ ತಕ್ಷಣ ತನ್ನ ಸೀರೆಯ ಅಂಚನ್ನು ಸೀಳಿ ತೆಗೆದು ಕೃಷ್ಣನ ಬೆರಳಿಗೆ ಕಟ್ಟಿ ರಕ್ತ ಹರಿಯುವುದನ್ನು ತಡೆದಳಂತೆ.

ಆಗ ಶ್ರೀ ಕೃಷ್ಣ ಪರಮಾತ್ಮನು ದ್ರೌಪದಿಗೆ ಅನವರತ ನಾನು ನಿನಗೆ ರಕ್ಷಣೆ ನೀಡುತ್ತೇನೆ ಎಂದು ಮಾತು ಕೊಟ್ಟಿದ್ದನಂತೆ. ಅಷ್ಟೇ ಅಲ್ಲದೆ ಮುಂದೆ ಭೂ ಲೋಕದಲ್ಲಿ ಯಾರು ಈ ದಿನದಂದು ತನ್ನ ಸೋದರಿಯಿಂದ ನೂಲಿನ ಎಳೆಯನ್ನು ಕಟ್ಟಿಸಿಕೊಂಡು ಸೋದರಿಯರನ್ನು ರಕ್ಷಿಸುತ್ತಿರುತ್ತಾರೋ ನಾನು ಅವರನ್ನು ರಕ್ಷಿಸುತ್ತೇನೆ ಎಂದು ವರ ನೀಡಿದ್ದರಂತೆ.

ಶ್ರೀ ಕೃಷ್ಣ ಪರಮಾತ್ಮನು ಕೊಟ್ಟ ಮಾತಿನಂತೆ ದ್ರೌಪದಿಯ ವಸ್ತ್ರ ಹರಣವಾಗುತ್ತಿದ್ದಾಗ ರಕ್ಷಣೆಗೆ ಧಾವಿಸಿದನು. ಪಾಂಡವರ ವನವಾಸದಲ್ಲಿ ನನ್ನ ಸಹೋದರಿ ಹಸಿವನ್ನು ಅನುಭವಿಸಬಾರದೆಂದು ದ್ರೌಪದಿಗೆ ಎಂದೂ ಬರಿದಾಗದ ಅಕ್ಷಯ ಪಾತ್ರೆಯನ್ನೂ ನೀಡಿ ಅನೇಕ ಸಂಕಷ್ಟಗಳಿಂದ ಕಾಪಾಡುತ್ತಾ ಪಾಂಡವರ ಹಿತಕ್ಕಾಗಿ ತಂಗಿಯ ಸುಖಕ್ಕಾಗಿ ಕೊನೆಯವರೆಗೂ ಅವರೊಟ್ಟಿಗೆ ಇದ್ದನೆಂದು ಈ ಕಥೆ ಹೇಳುತ್ತದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English