ಪಣಂಬೂರು: ಏಳುಪಟ್ಣ ಮೊಗವೀರ ಸಂಯುಕ್ತ ಸಭಾದ ಆಶ್ರಯದಲ್ಲಿ ಸಾಮೂಹಿಕ ಸಮುದ್ರ ಪೂಜೆ ಗುರುವಾರ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಜರಗಿತು.
ಕದ್ರಿ ಸುವರ್ಣ ಕದಳೀ ಮಠದ ರಾಜಯೋಗಿ ನಿರ್ಮಲನಾಥಜೀ ಮಹಾರಾಜರು ಸಮುದ್ರದ ಮಡಿಲಿಗೆ ಹಾಲು, ಸೀಯಾಳ, ಫಲಪುಷ್ಪಗಳನ್ನು ಅರ್ಪಿಸಿ ಮತ್ಸ್ಯಸಂಪತ್ತು ವೃದ್ಧಿಗೆ ಹಾಗೂ ಮೀನುಗಾರಿಕೆ ಸಂದರ್ಭ ಯಾವುದೇ ವಿಘ್ನಗಳು ಎದುರಾಗದಿರಲಿ ಎಂದು ಪ್ರಾರ್ಥಿಸಿದರು.
ಬೃಹತ್ ಶೋಭಾಯಾತ್ರೆ
ಆರಂಭದಲ್ಲಿ ಬೊಕ್ಕಪಟ್ಣ ಜಂಕ್ಷನ್‌ನಿಂದ ತಣ್ಣೀರುಬಾವಿ ತನಕ ಬೃಹತ್ ಶೋಭಾಯಾತ್ರೆ ನಡೆಯಿತು. ಹಾಲು, ಸೀಯಾಳ, ಫಲಪುಷ್ಪಗಳೊಂದಿಗೆ ಹೊರಟ ಯಾತ್ರೆಯು ಬೊಕ್ಕಪಟ್ಣ ಬ್ರಹ್ಮ ಬೊಬ್ಬರ್ಯ ದೈವಸ್ಥಾನದಿಂದ ಬೋಳೂರು ಅಶ್ವತ್ಥಕಟ್ಟೆ, ನಾಗಬ್ರಹ್ಮ ಸ್ಥಾನ, ಬೋಳೂರು ಗ್ರಾಮ ಚಾವಡಿಯಿಂದಾಗಿ ಗುರುಪುರ ನದಿ ದಾಟಿ ತಣ್ಣೀರುಬಾವಿ ಸಮುದ್ರ ಕಿನಾರೆಯಲ್ಲಿ ಸೇರಿತು.
ಪೂಜಾ ಕಾರ್ಯಕ್ರಮದ ಬಳಿಕ ಸಮುದ್ರ ರಾಜನಿಗೆ ಹಾಲು, ಸೀಯಾಳ, ಫಲಪುಷ್ಪಗಳನ್ನು ಸಮರ್ಪಿಸಲಾಯಿತು. ಕದ್ರಿ ಸುವರ್ಣ ಕದಳೀ ಮಠದ ರಾಜಯೋಗಿ ನಿರ್ಮಲನಾಥಜೀ ಮಹಾರಾಜರು ಸೇರಿದಂತೆ ಮೊಗವೀರರು, ಮತ್ಸ್ಯೋದ್ಯಮಿಗಳು ಭಾಗವಹಿಸಿದ್ದರು.
ಯಾಂತ್ರೀಕೃತ ಮೀನುಗಾರರ ಪ್ರಾ.ಸ. ಸಂಘದ ಮಾಜಿ ಅಧ್ಯಕ್ಷ ಬಿ. ಕಾಶೀನಾಥ ಕರ್ಕೇರ, ಮತ್ಸ್ಯೋದ್ಯಮಿಗಳಾದ ಭರತ್ ಭೂಷಣ್ ಬೋಳೂರು, ಮೋಹನ್ ಪಿ. ಕರ್ಕೇರ ಬೆಂಗರೆ ಅತಿಥಿಗಳಾಗಿದ್ದರು.
ಏಳುಪಟ್ಣ ಮೊಗವೀರ ಸಂಯುಕ್ತ ಮಹಾಸಭಾದ ಮುಖಂಡರಾದ ಆರ್.ಪಿ. ಬೋಳಾರ್, ಮಾಧವ ಸಾಲ್ಯಾನ್, ನಾರಾಯಣ ಕೋಟ್ಯಾನ್, ಮಾಧವ ಸಾಲ್ಯಾನ್, ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಸಭಾ ವ್ಯಾಪ್ತಿಯ ಬೋಳೂರು, ಬೊಕ್ಕಪಟ್ಣ, ಕುದ್ರೋಳಿ, ಹೊಗೆಬಜಾರ್, ಬೋಳಾರ, ಜಪ್ಪು, ನಿರೇಶ್ವಾಲ್ಯ, ಪಡುಹೊಗೆ ಮೊಗವೀರ ಸಭಾದ ಮೀನುಗಾರರು ಭಾಗವಹಿಸಿದ್ದರು.
Click this button or press Ctrl+G to toggle between Kannada and English