ಬಿಎಸ್‌ವೈಗೆ ಸಡ್ಡು : ಈಶ್ವರಪ್ಪ ಬ್ರಿಗೇಡ್‌ ಅಸ್ತಿತ್ವಕ್ಕೆ

2:49 PM, Saturday, August 20th, 2016
Share
1 Star2 Stars3 Stars4 Stars5 Stars
(No Ratings Yet)
Loading...

Eshwarappaಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಸಲಹೆ-ಸೂಚನೆಗೆ ಕ್ಯಾರೆ ಎನ್ನದ ಪಕ್ಷದ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಗುರುವಾರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಭೆ ನಡೆಸುವ ಮೂಲಕ ಹಿಂದುಳಿದ ಮತ್ತು ದಲಿತ ವರ್ಗಗಳ ಸಂಘಟನೆಗೆ ದಾಪುಗಾಲು ಇಟ್ಟಿದ್ದಾರೆ.

ಆದರೆ ಯಡಿಯೂರಪ್ಪ ಅವರ ಭಯದ ಕಾರಣವೋ ಏನೋ ಎಂಬಂತೆ ಈ ಬಾರಿ ಈಶ್ವರಪ್ಪ ಅವರು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದು, ಬ್ರಿಗೇಡ್‌ನ‌ ನೂತನ ಪದಾಧಿಕಾರಿಗಳ ಪಟ್ಟಿಯಿಂದ ಅಧಿಕೃತವಾಗಿ ಹೊರಗುಳಿದಿದ್ದಾರೆ. ಬ್ರಿಗೇಡ್‌ಗೆ 22 ರಾಜ್ಯ ಸಂಚಾಲಕರನ್ನು ನೇಮಿಸಿದ್ದು, ಇದರಲ್ಲಿ ಈಶ್ವರಪ್ಪ ಅವರ ಹೆಸರು ಇಲ್ಲ. ಈಶ್ವರಪ್ಪ ಅವರು ಸಂಘಟನೆಗೆ ಬೆಂಗಾವಲಾಗಿ ನಿಂತಿದ್ದಾರೆ ಎಂದು ಸಂಚಾಲಕರು ಮಾಹಿತಿ ನೀಡಿದ್ದಾರೆ.

ಜತೆಗೆ ಬಿಜೆಪಿ ಮತ್ತು ಯಡಿಯೂರಪ್ಪ ಅವರಿಗೆ ಶಕ್ತಿ ತುಂಬಲು ಈ ಸಂಘಟನೆ ಕೆಲಸ ಮಾಡಲಿದೆ. ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಹೇಳಿಕೆಯನ್ನು ಬ್ರಿಗೇಡ್‌ನ‌ ನೂತನ ಸಂಚಾಲಕರು ನೀಡುವ ಮೂಲಕ ಜಾಣ ನಡೆ ಪ್ರದರ್ಶಿಸಿದ್ದಾರೆ.

ಬರುವ ಸೆಪ್ಟೆಂಬರ್‌ 26ರಂದು ಹಾವೇರಿಯಲ್ಲಿ ಬ್ರಿಗೇಡ್‌ನ‌ ಮೊದಲ ಸಮಾವೇಶವನ್ನು ಸಾಂಕೇತಿಕವಾಗಿ ನಡೆಸಲು ತೀರ್ಮಾನಿಸಿದ್ದು, ನಂತರ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಕೂಡಲ ಸಂಗಮದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವ ಮೂಲಕ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಇನ್ನು 2-3 ದಿನಗಳಲ್ಲಿ ಬ್ರಿಗೇಡ್‌ ಅನ್ನು ನೋಂದಣಿ ಮಾಡಿಸಲಾಗುತ್ತದೆ.

ಗುರುವಾರ ಶಾಸಕರ ಭವನದಲ್ಲಿ ನಡೆದ ಬ್ರಿಗೇಡ್‌ನ‌ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಈಶ್ವರಪ್ಪ ಅವರು ಸಂಘಟನೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೂ ಯಾವುದೇ ಮಾಹಿತಿ ಅಥವಾ ಹೇಳಿಕೆ ನೀಡದೆ ಅಂತರ ಕಾಪಾಡಿದರು. ನಂತರ ನೂತನ ಸಂಚಾಲಕರು ಹೋಟೆಲ್‌ವೊಂದರಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಭೆಯ ವಿವರಗಳನ್ನು ನೀಡಿದರು. ಬ್ರಿಗೇಡ್‌ನ‌ ಲಾಂಛನವನ್ನೂ ಬಿಡುಗಡೆಗೊಳಿಸಿದರು.

ಸಂಚಾಲಕ ಹಾಗೂ ಬಿಜೆಪಿಯ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು ಮಾತನಾಡಿ, ಯಾವುದೇ ಪಕ್ಷಕ್ಕೆ ಸೇರದೆ ತಟಸ್ಥರಾಗಿರುವವರೂ ಬಿಜೆಪಿಯನ್ನು ಬಲಪಡಿಸಲು ಸಾಧ್ಯವಾಗಬೇಕು ಎಂಬ ಕಾರಣಕ್ಕಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ರಚಿಸುವ ನಿರ್ಧಾರಕ್ಕೆ ಬರಲಾಗಿದೆ. ಈ ಸಂಘಟನೆಗೆ ಈಶ್ವರಪ್ಪ ಅವರನ್ನು ನಾವೇ ಆಹ್ವಾನಿಸಿದ್ದೇವೆ. ಯಡಿಯೂರಪ್ಪ ಅವರಿಗೆ ಶಕ್ತಿ ತುಂಬಲು, ಬಿಜೆಪಿಗೆ ಶಕ್ತಿ ತುಂಬಲು ಈ ಸಂಘಟನೆ ಸ್ಥಾಪಿಸಲಾಗುತ್ತಿದೆ. ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರು ಸಹೋದರರಿದ್ದಂತೆ. ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದರು.

ಇನ್ನೋರ್ವ ಸಂಚಾಲಕ ಹಾಗೂ ಹಿಂದುಳಿದ ವರ್ಗಗಳ ಮುಖಂಡ ಕೆ.ಮುಕುಡಪ್ಪ ಮಾತನಾಡಿ, ಯಡಿಯೂರಪ್ಪ ಅವರನ್ನು ನಮ್ಮ ನಾಯಕರನ್ನಾಗಿ ಒಪ್ಪಿಕೊಂಡಿದ್ದೇವೆ. ಈ ಸಂಘಟನೆಯ ಉದ್ಘಾಟನೆಗೆ ಯಡಿಯೂರಪ್ಪ ಅವರನ್ನೇ ಆಹ್ವಾನಿಸುತ್ತೇವೆ. ಅವರನ್ನು ಭೇಟಿ ಮಾಡಿ ಸಂಘಟನೆ ರಚನೆಯ ಉದ್ದೇಶವನ್ನು ವಿವರಿಸಿ ಮನವೊಲಿಸುತ್ತೇವೆ. ಈಶ್ವರಪ್ಪ ಅವರೇ ನಮ್ಮ ಬ್ರಿಗೇಡ್‌ನ‌ ನಾಯಕರು. ಅವರೂ ಯಡಿಯೂರಪ್ಪ ಅವರ ಮನವೊಲಿಸಲಿದ್ದಾರೆ ಎಂದು ತಿಳಿಸಿದರು.

ಮತ್ತೂಬ್ಬ ಸಂಚಾಲಕ ಮತ್ತು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಸ್ವಾತಂತ್ರÂ ದೊರೆತು 70 ವರ್ಷಗಳಾದರೂ ಹಿಂದುಳಿದ ಮತ್ತು ದಲಿತ ವರ್ಗಗಳ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕಾಗಿದೆ. ಈ ಸಂಘಟನೆ ಹುಟ್ಟು ಹಾಕುವಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಈಶ್ವರಪ್ಪ ಅವರು ಈ ಸಂಘಟನೆಗೆ ಬೆಂಗಾವಲಾಗಿ ಇರುತ್ತಾರೆ ಎಂದು ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English