ಮಂಗಳೂರು: ದೆಹಲಿಯಲ್ಲಿ ಆ. 23ರಂದು ಎಲ್ಲಾ ರಾಜ್ಯಗಳ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು ಅದರಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಏತನ್ಮಧ್ಯೆ ಕೆ.ಎಸ್. ಈಶ್ವರಪ್ಪರವರೊಂದಿಗೆ ಯಾವುದೇ ಭಿನ್ನಮತವಾಗಲಿ, ಗೊಂದಲವಾಗಲಿ ಇಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭಿನ್ನಾಭಿಪ್ರಾಯಗಳಿಗೆ ತೆರೆ ಎಳೆದಿದ್ದಾರೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ನನ್ನ ಹಾಗೂ ಈಶ್ವರಪ್ಪ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈಗಾಗಲೇ ಎಲ್ಲ ವಿಷಯವನ್ನು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಪಕ್ಷದ ಚೌಕಟ್ಟಿನ ಹೊರಗೆ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೆ ಅಭ್ಯಂತರ ಇಲ್ಲ. ಆದರೆ ಈ ವಿಷಯದ ಕುರಿತು ಮಾಧ್ಯಮದ ಮುಂದೆ ಚರ್ಚಿಸುವುದಿಲ್ಲ ಎಂದರು.
ಇನ್ನು ರೈತರ ಆತ್ಮಹತ್ಯೆಯಲ್ಲಿ ರಾಜ್ಯ ಮೂರನೆ ಸ್ಥಾನ ಪಡೆದುಕೊಂಡಿದೆ. ಇದು ಕಳವಳಕಾರಿ ಹಾಗೂ ನಾಚಿಕೆಗೇಡಿನ ವಿಷಯ. ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಇನ್ನೂ ಪರಿಹಾರ ನೀಡಿಲ್ಲ. ಕನಿಷ್ಠ ರೈತರ ಆತ್ಮಹತ್ಯೆಗೆ ಕಾರಣವೇನೆಂಬುದರ ಬಗ್ಗೆಯೂ ಸರ್ಕಾರ ಅಧ್ಯಯನ ನಡೆಸಿಲ್ಲ. ಇನ್ನೂ ಕಾಲ ಮಿಂಚಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಿಗೆ ಪರಿಹಾರ ನೀಡಲು ಮುಂದಾಗಬೇಕೆಂದರು.
ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿನಿಯರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಯಡಿಯೂರಪ್ಪ, ತಕ್ಷಣವೇ ದೌರ್ಜನ್ಯ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯ ಸರ್ಕಾರವೇ ಹೊಣೆ ಎಂದರು.
ಪ್ರಧಾನಿ ಮೋದಿಯವರು 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಿರಂಗ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬಹುದು. ಈ ಕಾರ್ಯಕ್ರಮದಲ್ಲಿ ಪಕ್ಷದ ಬಾವುಟವನ್ನು ಬಳಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Click this button or press Ctrl+G to toggle between Kannada and English