ಮೂಡುಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ನಡೆದ ಆಹ್ವಾನಿತ ಪುರುಷರ ರಾಜ್ಯಮಟ್ಟದ ಬಾಲ್‌ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಳ್ವಾಸ್ ತಂಡ ವಿಜಯಶಾಲಿಯಾಗಿದೆ.
ರಾಜ್ಯಮಟ್ಟದ 6 ಆಹ್ವಾನಿತ ತಂಡಗಳೊಂದಿಗೆ ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆದವು. ಮೊದಲ ಸೆಮಿಫೈನಲ್ ಹಂತದಲ್ಲಿ ಆಳ್ವಾಸ್ ಹಾಗೂ ಬೆಂಗಳೂರಿನ ಬನಶಂಕರಿ ತಂಡಗಳು ಮುಖಾಮುಖಿಯಾದವು.
ಮೊದಲ ಸೆಮಿಫೈನಲ್‌ನಲ್ಲಿ ಮುನ್ನಡೆ ಪಡೆದ ಆಳ್ವಾಸ್ ತಂಡ ಗೆಲುವು ಸಾಧಿಸಿತು. ಎರಡನೇ ಸೆಮಿಫೈನಲ್ ಹಂತದಲ್ಲಿ ಚಾಮರಾಜನಗರ ಹಾಗೂ ಕೆನರಾ ಬ್ಯಾಂಕ್ ತಂಡಗಳು ಸೆಣಸಾಟ ನಡೆಸಿದವು. ಈ ಹಂತದಲ್ಲಿ ಕೆನರಾ ತಂಡ ರೋಚಕ ಗೆಲುವನ್ನು ಪಡೆದು ಫೈನಲ್‌ಗೆ ಲಗ್ಗೆಯಿಟ್ಟಿತು.
ಫೈನಲ್ ಹಂತದಲ್ಲಿ ಆಳ್ವಾಸ್ ಹಾಗೂ ಕೆನರಾ ತಂಡಗಳು ಚಾಂಪಿಯನ್‌ಶಿಪ್‌ಗಾಗಿ ಮುಖಾಮುಖಿಯಾದವು. ಮೊದಲ ಸೆಟ್‌ನಲ್ಲಿ ಆಳ್ವಾಸ್ ತಂಡವು 35-30 ಅಂಕಗಳೊಂದಿಗೆ ಮುನ್ನಡೆ ಸಾಧಿಸಿತು. ಎರಡನೆಯ ಸೆಟ್‌ನಲ್ಲಿಯೂ ಸಹ ಉತ್ತಮ ಪ್ರದರ್ಶನವನ್ನು ಮುಂದುವರೆಸಿದ ಆಳ್ವಾಸ್ ತಂಡ 35-22 ಅಂಕಗಳನ್ನು ಮೂಲಕ ಪ್ರಬಲ ಕೆನರಾ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಕೆನರಾ ತಂಡ ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಯಿತು.
ಆಳ್ವಾಸ್‌ನ ರಂಜಿತ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಏಕಲವ್ಯ ಪ್ರಶಸ್ತಿ ವಿಜೇತ ಮುಹಮ್ಮದ್ ಇಲಿಯಾನ್ ಹಾಗೂ ಉಮೇಶ್ ಶೆಟ್ಟಿ ವಿಜೇತರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
Click this button or press Ctrl+G to toggle between Kannada and English