ಮನಪಾ ದಿನಕೂಲಿ ನೌಕರರ ಅರೆಬೆತ್ತಲೆ ಮೆರವಣಿಗೆ

12:37 PM, Thursday, July 21st, 2011
Share
1 Star2 Stars3 Stars4 Stars5 Stars
(No Ratings Yet)
Loading...

Daily wages/ಪೌರಕಾರ್ಮಿಕಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಇಲಾಖೆಯಲ್ಲಿ ದಿನಕೂಲಿ ನೌಕರರಾಗಿ ದುಡಿಯುತ್ತಿರುವ ಪೌರ ಕಾರ್ಮಿಕರು ತಮ್ಮನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಬುಧವಾರ ಅರೆಬೆತ್ತಲೆ ಮೆರವಣಿಗೆಯ ಜಿಲ್ಲಾಧಿಕಾರಿ ಕಚೇರಿ ಬಳಿ ವಿನೂತನ ಪ್ರತಿಭಟನೆ ನಡೆಸಿದರು.

ದಲಿತ ಸಂಘರ್ಷ ಸಮಿತಿ ಸೇರಿದಂತೆ ಹಲವಾರು ದಲಿತ ಸಂಘಟನೆಗಳ ಬೆಂಬಲದೊಂದಿಗೆ ದ.ಕ. ಜಿಲ್ಲಾ ಪೌರ ಕಾರ್ಮಿಕರು ಹಾಗೂ ನಾಲ್ಕನೆ ದರ್ಜೆ ನೌಕರರ ಸಂಘದ ನೇತೃತ್ವದಲ್ಲಿ ನಗರದ ಜ್ಯೋತಿ ವೃತ್ತದಿಂದ ಅರೆಬೆತ್ತಲೆ ಮೆರವಣಿಗೆಯಲ್ಲಿ  ಪೌರ ಕಾರ್ಮಿಕರು ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿದರು.

Daily wages/ಪೌರಕಾರ್ಮಿಕಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ದಲಿತ ನಾಯಕ ಪಿ. ಕೇಶವ,  ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರ, ಹಿಂದೆ ಖಾಯಂ ನೆಲೆಯಲ್ಲಿ ಪೌರ ಕಾರ್ಮಿಕರು ನಗರ ಸ್ವಚ್ಛತೆಯಲ್ಲಿ ತೊಡಗಿದ್ದ ಸಂದರ್ಭ ನಗರ ರೋಗ ರುಜಿನಗಳಿಂದ ಮುಕ್ತವಾಗಿತ್ತು. ಇತ್ತೀಚೆಗೆ ಕೆಲ ವರ್ಷಗಳಿಂದ ಈ ನಗರ ಸ್ವಚ್ಛತೆ ಕಾರ್ಯ ಗುತ್ತಿಗೆಯಡಿ ನಡೆಯುತ್ತಿದ್ದು, ಮಲೇರಿಯಾ, ಡೆಂಗ್‌ನಂತಹ ರೋಗಗಳೂ ಹೆಚ್ಚುತ್ತಿವೆ. ಕಳೆದ ಸುಮಾರು 15 ವರ್ಷಗಳಿಂದ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟು ಪೌರ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಗೆ ಸರಕಾರ ಸ್ಪಂದಿಸದೆ ಕಿವುಡಾಗಿದೆ ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದಲಿತ ನಾಯಕ ಎಸ್.ಪಿ. ಆನಂದ ಮಾತನಾಡಿ, ಮುಂಜಾನೆ ಹೊತ್ತು ನಗರ ಸ್ವಚ್ಛತೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಪೌರ ಕಾರ್ಮಿಕರ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವಲ್ಲಿ ಸರಕಾರ ಕಾಳಜಿ ವಹಿಸದಿರುವುದು ಖಂಡನೀಯ ಎಂದರು. ಪ್ರತಿಭಟನಾಕಾರನ್ನುದ್ದೇಶಿಸಿ ದಲಿತ ನಾಯಕ ನಿರ್ಮಲ್ ಕುಮಾರ್, ಕಾರ್ಪೊರೇಟರ್ ಅಪ್ಪಿ ಮೊದಲಾದವರು ಮಾತನಾಡಿದರು.

ಮನಪಾ ಪೌರಕಾರ್ಮಿಕರಿಗೆ ಉಚಿತ ವೈದ್ಯಕೀಯ ಆರೋಗ್ಯಕಾರ್ಡ್ ಒದಗಿಸಬೇಕು. ಪೌರ ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣದ ಖರ್ಚನ್ನು ನಗರ ಪಾಲಿಕೆ ಭರಿಸಬೇಕು. ಆರೋಗ್ಯ ಇಲಾಖೆಯಲ್ಲಿ ಪೌರ ಕಾರ್ಮಿಕರಿಗೆ ನೈರ್ಮಲ್ಯ ನಿರೀಕ್ಷಕರಿಂದ ಆಗುವ ಮೋಸ, ವಂಚನೆ, ದಬ್ಬಾಳಿಕೆ ನಿಲ್ಲಬೇಕು, 10ರಿಂದ 15 ವರ್ಷ ಮೇಲ್ಪಟ್ಟು ದುಡಿಯುತ್ತಿರುವ ದಿನಕೂಲಿ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಎಂಬ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟವರಿಗೆ ಸಲ್ಲಿಸಿದರು. ಬಳಿಕ ಪೌರ ಕಾರ್ಮಿಕರ ಅರೆಬೆತ್ತಲೆ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಮನಪಾ ಕಚೇರಿವರೆಗೆ ಮುಂದುವರಿಯಿತು.

ದ.ಕ. ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೆ ದರ್ಜೆ ನೌಕರರ ಸಂಘದ ಗೌರವಾಧ್ಯಕ್ಷ ಬಿ. ಶಿವಪ್ಪ, ಪ್ರಧಾನ ಕಾರ್ಯದರ್ಶಿ ಕೆ. ಸುರೇಶ, ಅಧ್ಯಕ್ಷ ಗಂಗಾಧರ, ಜೊತೆ ಕಾರ್ಯದರ್ಶಿ ಸೇಸಪ್ಪ ಮೊದಲಾದವರು ಮೆರವಣಿಗೆಯ ನೇತೃತ್ವ ವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English