ಚಾರ್ಮಾಡಿ ಘಾಟಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

12:44 PM, Tuesday, August 23rd, 2016
Share
1 Star2 Stars3 Stars4 Stars5 Stars
(No Ratings Yet)
Loading...

Charmadyಬೆಳ್ತಂಗಡಿ: ಚಾರ್ಮಾಡಿ ಘಾಟಿಯ 11ನೇ ತಿರುವಿನಲ್ಲಿ ರವಿವಾರ ಕೊಲೆಯಾದ ಸ್ಥಿತಿಯಲ್ಲಿ ದೊರೆತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ.

ಚಾರ್ಮಾಡಿ ಘಾಟಿಯ ಕಣಿವೆಯಲ್ಲಿ 30ರಿಂದ 35 ವಯಸ್ಸಿನ ಮಹಿಳೆಯ ಶವ ದೊರೆತಿತ್ತು. ಎಡಗೈಯಲ್ಲಿ ಪ್ರಿಯ ಎಂಬ ಹಚ್ಚೆ ಇದ್ದು ಬಲಗೈಯ ಮೇಲೆ ಸುಟ್ಟ ಗಾಯದ ಹಳೆಯ ಗುರುತುಗಳಿವೆ ಎಂದು ಪ್ರಕರಣದ ತನಿಖಾಧಿಕಾರಿ ಮೂಡಿಗೆರೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಜಗದೀಶ್‌ ತಿಳಿಸಿದ್ದಾರೆ.

ಯಾವುದೋ ಊರಿನಲ್ಲಿ ಕೊಲೆ ಮಾಡಿ ಇಲ್ಲಿ ತಂದು ಬಿಸಾಡಿರಬಹುದು ಎನ್ನುವುದಕ್ಕೆ ಪೂರಕವಾಗಿ ಕುತ್ತಿಗೆಗೆ ಹಗ್ಗ ಬಿಗಿದು ಉಸಿರು ಗಟ್ಟಿಸಿದ ಗುರುತು ಇದೆ. ಶನಿವಾರ ರಾತ್ರಿ ಅಥವಾ ರವಿವಾರ ಮುಂಜಾನೆ ವೇಳೆಗೆ ಇಲ್ಲಿ ತಂದು ಬಿಸಾಡಿರಬಹುದು ಎಂಬ ಅನುಮಾನಗಳಿವೆ.

ಚಾರ್ಮಾಡಿ ಘಾಟಿ ಕೊಲೆಗಾರರ ಸ್ವರ್ಗವಾಗಿದ್ದರೂ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ. ಫೈನಾನ್ಶಿಯರ್‌ ಕುಪ್ಪುಸ್ವಾಮಿ ಸೇರಿದಂತೆ ಅದೆಷ್ಟೋ ಕೊಲೆಯಾದ ಪ್ರಕರಣಗಳ ಶವ ಇಲ್ಲಿ ಎಸೆದಿದ್ದರೂ ಪೊಲೀಸರ ಚಾಣಾಕ್ಷ ತನಿಖೆಯಿಂದ ಪತ್ತೆಯಾಗಿದೆ. ಈ ಪ್ರಕರಣ ಕೂಡ ಕಠಿನ ಕಾರ್ಯಾಚರಣೆ ಮೂಲಕ ಬೆಳಕಿಗೆ ಬರಬಹುದು ಎಂದು ಸಾರ್ವಜನಿಕರು ಆಶಾಭಾವ ವ್ಯಕ್ತಪಡಿಸಿದ್ದಾರೆ.

ಮಹಿಳೆಯ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಯಾವ ರೀತಿ ಹಾಗೂ ಯಾಕಾಗಿ ಕೊಲೆ ನಡೆದಿರಬಹುದು ಎಂದು ಶಂಕಿಸಲು ಸಾಧ್ಯವಿಲ್ಲ. ಮನೆ ಮಂದಿ ಕೊಲೆಗೈದರೇ, ಆಪ್ತರು ಕೊಲೆ ಮಾಡಿದರೇ, ಎಲ್ಲಿ ಕೊಲೆ ಮಾಡಿ ಇಲ್ಲಿ ತಂದು ಹಾಕಿದರು ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ. ಸಾಂಸಾರಿಕ ಕಾರಣ, ಚಿನ್ನದ ಕಾರಣ, ವ್ಯಾಜ್ಯದಂತಹ ವೈಮನಸ್ಯದ ಕಾರಣವೇ ಎನ್ನುವುದು ಕೂಡಾ ಪ್ರಕರಣದ ತನಿಖೆ ಬಳಿಕವೇ ಗೊತ್ತಾಗಬೇಕಿದೆ. ಆದರೆ ಅದಕ್ಕೂ ಮೊದಲು ಕೊಲೆಯಾದ ಮಹಿಳೆ ಯಾರೆಂಬ ಪತ್ತೆಯಾಗಬೇಕಿದೆ. ಮಾಹಿತಿ ಇದ್ದವರು ಬಣಕಲ್‌ ಪೊಲೀಸ್‌ ಠಾಣೆ ಅಥವಾ ಮೂಡಿಗೆರೆ ಠಾಣೆಗೆ ಮಾಹಿತಿ ನೀಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಮರಳು ಸಾಗಾಟ ಸಂದರ್ಭ ಇಲ್ಲಿ ತನಿಖಾ ಠಾಣೆ ಸ್ಥಾಪಿಸಲಾಗಿತ್ತು. ಅದೇ ರೀತಿ ಅಧಿಕ ಭಾರದ ಲಾರಿಗಳ ಓಡಾಟ ನಿಷೇಧವಿದ್ದಾಗಲೂ ಪೊಲೀಸ್‌ ತನಿಖಾ ಠಾಣೆ ಇತ್ತು. ಆದರೆ ಬಣಕಲ್‌ ವ್ಯಾಪ್ತಿಯಲ್ಲಿ ಘಾಟಿಯ ಒಂದು ತುದಿಯಲ್ಲಿ ಹಾಗೂ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಘಾಟಿಯ ಆರಂಭದ ತುದಿಯಲ್ಲಿ ಎರಡು ಪೊಲೀಸ್‌ ಚೆಕ್‌ಪೋಸ್ಟ್‌ಗಳನ್ನು ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಗೋ ಅಕ್ರಮ ಸಾಗಾಟ ಸಹಿತ ಹಲವು ದಂಧೆಗಳಿಗೆ ಈ ದಾರಿ ರಹದಾರಿಯಾಗಿದ್ದು ಸಿಸಿ ಕೆಮರಾ ಅಳವಡಿಕೆ ಮೂಲಕ ಅಪರಾಧ ಚಟುವಟಿಕೆ ಮೇಲೆ ಕಣ್ಗಾವಲು ಇಡುವಂತೆ ಮನವಿ ಮಾಡಿದ್ದಾರೆ.

ಸುಮಾರು 80 ಅಡಿ ಆಳದಲ್ಲಿ ಶವ ಇತ್ತು. ಇದನ್ನು ಮೇಲೆತ್ತಲು ಸ್ಥಳೀಯರು ಹಾಗೂ ಪೊಲೀಸರು ಪರಿಶ್ರಮ ಪಡಬೇಕಾಯಿತು. ಮೃತದೇಹವನ್ನು ಮೂಡಿಗೆರೆ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸೋಮವಾರ ಕೂಡಾ ಇದನ್ನು ಹಾಗೆಯೇ ಇಡಲಾಗಿದ್ದು ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಮೇಲ್ನೋಟಕ್ಕೆ ಕರಾವಳಿ ಪ್ರಾಂತ್ಯದ ಮಹಿಳೆಯಂತಿದೆ ಎಂದು ಪೊಲೀಸರು ಹೇಳಿದ್ದಾರೆ. ಮೂಗು, ಕಿವಿಯಲ್ಲಿನ ಆಭರಣ, ಕಾಲ್ಗೆಜ್ಜೆ ಹಾಗೆಯೇ ಇದೆ. ಕಪ್ಪು ಚಿತ್ರಗಳಿರುವ ಬಿಳಿ ಬಣ್ಣದ ಗುಲಾಬಿ ಅಂಚಿನ ಚೂಡಿದಾರ , ಕಪ್ಪು ಪ್ಯಾಂಟ್‌ ಧರಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English