ಮಂಗಳೂರು: ಪಡಿತರ ಸಾಮಗ್ರಿ ಪಡೆಯಲು ಪೋರ್ಟೆಬಿಲಿಟಿ ಸೌಲಭ್ಯ ಜಾರಿಯಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಮಹಾ ನಗರಪಾಲಿಕೆ ಸರಹದ್ದಿನ ಕುಟುಂಬವೊಂದು ಈಗ ನಿರ್ಧಿಷ್ಟ ನ್ಯಾಯಬೆಲೆ ಅಂಗಡಿಗೆ ತೆರಳಿ ಪಡಿತರ ಸಾಮಗ್ರಿ ಪಡೆಯಬೇಕಾಗುತ್ತದೆ. ಆದರೆ ಮುಂದೆ ಅಂತಹ ಕುಟುಂಬಗಳು ಪಾಲಿಕೆ ವ್ಯಾಪ್ತಿಯ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಸಾಮಗ್ರಿ ಪಡೆಯಬಹುದಾಗಿದೆ. ನಗರಸಭೆ, ಪುರಸಭೆ ವ್ಯಾಪ್ತಿ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯ ಕುಟುಂಬಗಳು ಅದೇ ಸರಹದ್ದಿನ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡಿತರ ವಸ್ತುಗಳನ್ನು ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದರು.
ಗ್ರಾಮೀಣ ಭಾಗದ ಪಡಿತರ ಚೀಟಿದಾರರು ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಿಂದ ಹೊರಗಿರುವ, ಅದೇ ತಾಲೂಕಿನ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ರೇಶನ್ ಸಾಮಗ್ರಿ ಪಡೆದುಕೊಳ್ಳಬಹುದಾಗಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಆಗಸ್ಟ್ ತಿಂಗಳಲ್ಲಿ ಕೆಲವೊಂದು ಪಡಿತರ ಅಂಗಡಿಗಳ ಸರಹದ್ದಿನಲ್ಲಿ ಪೈಲೆಟ್ ಯೋಜನೆಯಾಗಿ ಕೂಪನ್ ಪದ್ಧತಿಯನ್ನು ಜಾರಿಗೊಳಿಸಲಾಗಿತ್ತು. ರಾಜ್ಯದಲ್ಲಿ ಅಂದಾಜು 12 ಲಕ್ಷ ಕಾರ್ಡ್‌ದಾರರಿಗೆ ಕೂಪನ್ ಪದ್ಧತಿ ಜಾರಿಗೊಳಿಸಲಾಗಿದೆ. ಆ ಪೈಕಿ 11 ಲಕ್ಷ ಕಾರ್ಡ್‌ದಾರರು ಕೂಪನ್ ಮೂಲಕ ಪಡಿತರ ಸಾಮಗ್ರಿ ಪಡೆದಿದ್ದಾರೆ. ಕೂಪನ್ ವಿತರಿಸುವವರಿಗೆ ಒಂದು ಕೂಪನ್‌ಗೆ ಇಲಾಖೆ ಮೂರು ರೂಪಾಯಿ ನೀಡುತ್ತಿತ್ತು. ಈಗ ಅದನ್ನು ಐದು ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದರು.
Click this button or press Ctrl+G to toggle between Kannada and English