ಮಂಗಳೂರು: ಕೇಂದ್ರ ಗೃಹ ಮಂತ್ರಾಲಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ‘ಪೌರ ರಕ್ಷಣಾ ಘಟಕ’ ಸ್ಥಾಪಿಸಲು ಆದೇಶ ನೀಡಿದ್ದು, ಮುಂದಿನ 5-6 ತಿಂಗಳಲ್ಲಿ ಇದರ ಸ್ಥಾಪನೆಯಾಗಲಿದೆ ಎಂದು ಗೃಹರಕ್ಷಕ ದಳದ ಎಡಿಜಿಪಿ ಎನ್. ಶಿವಕುಮಾರ್ ಹೇಳಿದರು. ಮಂಗಳೂರಿನ ಮೇರಿಹಿಲ್‌ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಮಂಗಳವಾರ ಘಟಕಾಧಿಧಿಕಾರಿಗಳ ಸಭೆ ಬಳಿಕ ಅವರು ಮಾತನಾಡಿದರು.
ಪೌರ ರಕ್ಷಣಾ ದಳ ಬೆಂಗಳೂರು ನಗರ, ಉತ್ತರ ಕನ್ನಡದ ಕೈಗಾ ಹಾಗೂ ರಾಯಚೂರಿನ ಶಕ್ತಿನಗರದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ದೇಶದ ಯುದ್ಧ ಸಂದರ್ಭ ಪ್ರತಿಯೊಬ್ಬರೂ ಹೋರಾಡುವಂತೆ ಅಣಿಗೊಳಿಸಲು ತರಬೇತಿ ನೀಡಲಾಗುತ್ತದೆ ಹಾಗೂ ಪ್ರಾಕೃತಿಕ ವಿಕೋಪ ಸಂದರ್ಭ ಸ್ಥಳೀಯಾಡಳಿತದ ಜೊತೆ ಕೈಜೋಡಿಸಿ ಸಾರ್ವಜನಿಕರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಿದೆ.
1962ರ ಭಾರತ-ಪಾಕ್ ಯುದ್ಧದ ವೇಳೆ ದೇಶದ ಸುರಕ್ಷೆಯ ಉದ್ದೇಶದೊಂದಿಗೆ ಭಾರತ ಸರಕಾರ ಸಿವಿಲ್ ಡಿಫೆನ್ಸ್ ಸ್ಥಾಪಿಸಿತು. ಬಳಿಕ ಪ್ರಾಕೃತಿಕ ವಿಕೋಪ ಸಂದರ್ಭ ನಾಗರಿಕರ ರಕ್ಷಣೆಗೆ ತುರ್ತಾಗಿ ಸ್ಪಂದಿಸುವ ಕಾರ್ಯವನ್ನೂ ಇದಕ್ಕೆ ಸೇರಿಸಲಾಯಿತು ಎಂದರು. ಈ ದಳದಲ್ಲಿ ಕಾರ್ಯನಿರ್ವಹಿಸಲು ಆಸಕ್ತರಿರುವ ಕ್ರಿಯಾಶೀಲ ವ್ಯಕ್ತಿಗಳು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಈ ದಳದ ಸಂಖ್ಯಾಬಲವನ್ನು ಇನ್ನೂ ನಿರ್ದಿಷ್ಟಗೊಳಿಸಲಾಗಿಲ್ಲ.
ದೇಶದಲ್ಲಿ ಅತೀ ಹೆಚ್ಚು ಕಾಶ್ಮೀರದಲ್ಲಿ 14 ಇಂತಹ ಘಟಕಗಳಿದ್ದು, ಬೆಂಗಳೂರಿನಲ್ಲಿ 120 ಸದಸ್ಯರಿದ್ದಾರೆ. ನೇಮಕ ಸಂದರ್ಭ ಗೃಹ ರಕ್ಷದ ದಳ ಕಮಾಂಡೆಂಟ್ ಅವರೇ ಚೀಫ್‌ವಾರ್ಡನ್ ಆಗಿ ಕಾರ್ಯನಿರ್ವಹಿಸುವರು ಎಂದರು.
ರಾಜ್ಯದಲ್ಲಿದ್ದ 25,000 ಗೃಹರಕ್ಷಕರ ಸಂಖ್ಯೆಯನ್ನು 30,000ಕ್ಕೆ ಏರಿಸಲಾಗಿದೆ. ಈ ಹಿಂದೆ ಗೃಹರಕ್ಷಕರಿಗೆ ಸಂಬಂಧಿಸಿ ಸರಕಾರಕ್ಕೆ ಕಳುಹಿಸಿದ ಪ್ರಸ್ತಾವನೆಗೆ ಒಪ್ಪಿಗೆ ದೊರಕಿದ್ದು, ಪರಿಹಾರ ಮತ್ತು ಅನುದಾನವನ್ನೂ ಏರಿಕೆ ಮಾಡಿದೆ.
ರಾಜ್ಯದ ಗೃಹರಕ್ಷಕರಿಗೆ 250 ರೂ. ಇದ್ದ ವೇತನ 325 ರೂ. ಗೆ ಹಾಗೂ ಬೆಂಗಳೂರು ನಗರದಲ್ಲಿ 325 ರೂ.ವನ್ನು 400 ರೂ.ಗೆ ಹೆಚ್ಚಿಸಲಾಗಿದೆ ಎಂದರು. 11 ಸಾವಿರ ಮಂದಿ ಗೃಹರಕ್ಷಕರು ಪ್ರತಿನಿತ್ಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯ 14 ಘಟಕಗಳಲ್ಲಿ 693 ಮಂದಿ ಇದ್ದು, ಈ ಪೈಕಿ 269 ಮಂದಿ ಪ್ರತಿನಿತ್ಯ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಕರ್ತವ್ಯನಿರತ ಸಂದರ್ಭ ಮೃತಪಟ್ಟಲ್ಲಿ 5 ಲಕ್ಷ ರೂ., ಶಾಶ್ವತ ಅಂಗವೈಕಲ್ಯಕ್ಕೆ 3 ಲಕ್ಷ ರೂ. ಅಲ್ಲದೇ ಸಣ್ಣಪುಟ್ಟ ಗಾಯಕ್ಕೂ ಪರಿಹಾರ ನೀಡಲು ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿದೆ ಎಂದು ತಿಳಿಸಿದರು. ಈ ಸಂದರ್ಭ ದ.ಕ. ಜಿಲ್ಲಾ ಗೃಹರಕ್ಷದಳದ ಕಮಾಂಡೆಂಟ್ ಡಾ| ಮುರಳಿ ಮೋಹನ ಚೂಂತಾರು, ಉಡುಪಿ ಗೃಹರಕ್ಷದಳ ಕಮಾಂಡೆಂಟ್ ಡಾ| ಪ್ರಶಾಂತ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English