ಜನವಾಸವಿಲ್ಲದ ಮನೆಯಿಂದ 840 ಲೀಟರ್ ಮದ್ಯ ವಶ ಕಾರು ಸಹಿತ ಓರ್ವ ಸೆರೆ: ಇನ್ನೋರ್ವನ ವಿರುದ್ಧ ದೂರು

10:50 AM, Thursday, August 25th, 2016
Share
1 Star2 Stars3 Stars4 Stars5 Stars
(No Ratings Yet)
Loading...

Alcohalಕಾಸರಗೋಡು: ಓಣಂ ಸಮಯದಲ್ಲಿ ವಿತರಿಸಲೆಂದು ಬಚ್ಚಿಡಲಾಗಿದ್ದ ಬೃಹತ್ ಪ್ರಮಾಣದ ವಿದೇಶ ಮದ್ಯವನ್ನು ಅಬಕಾರಿ ಮತ್ತು ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ವಶಪಡಿಸಿದ್ದಾರೆ. ಪೊಯಿನಾಚಿ ಸಮೀಪದ ಮೈಲಾಟಿ ರಾಷ್ಟ್ರೀಯ ಹೆದ್ದಾರಿ ಜವುಳಿ ಗಿರಣಿಯ ಸಮೀಪದ ಹೌಸಿಂಗ್ ಕಾಲನಿ ಬಳಿ ಜನವಾಸ ವಿಲ್ಲದ ಹೆಂಚುಹಾಸಿದ ಮನೆಯಿಂದ ಈ ಮಾಲು ವಶಪಡಿಸಲಾಗಿದೆ.

750, 500 ಮತ್ತು 100 ಎಂ.ಎಲ್‌ನ ಒಟ್ಟು 840 ಲೀಟರ್ ಮದ್ಯ ವಶಪಡಿಸಲಾದ ಮಾಲಿನಲ್ಲಿದೆ. ಈ ಸಂಬಂಧ ಕೆ. ಸುನಿಲ್ ಕುಮಾರ್ (23) ಎಂಬಾತನನ್ನು ಸೆರೆಹಿಡಿದು ಈತ ಬಳಸುತ್ತಿದ್ದ ಕಾರನ್ನು ಕಾರ್ಯಾಚರಣೆ ನಡೆಸಿದ ತಂಡ ವಶಕ್ಕೆ ತೆಗೆದುಕೊಂಡಿದೆ. ಈತ ಈ ಮಾಲು ಇರಿಸಿದ ಮನೆ ಸಮೀಪದ ನಿವಾಸಿಯಾಗಿದ್ದಾನೆ.

ರಾಜ್ಯ ಅಬಕಾರಿ ಆಯುಕ್ತ ಋಷಿರಾಜ್ ಸಿಂಗ್ ಮಂಗಳವಾರ ಜಿಲ್ಲೆಗೆ ಆಗಮಿಸಿದ್ದರು. ಆ ವೇಳೆಯಲ್ಲೇ ಈ ಕಾರ್ಯಾಚರಣೆ ನಡೆದಿದೆ. ಮಾಲು ಬಚ್ಚಿಟ್ಟ ಬಗ್ಗೆ ಅಬಕಾರಿ ತಂಡ ಮತ್ತು ಬೇಕಲ ಪೊಲೀಸರಿಗೂ ಗುಪ್ತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅಬಕಾರಿ ಸ್ಪೆಷಲ್ ಸ್ಕ್ವಾಡ್ ಮತ್ತು ಬೇಕಲ ಎಸ್.ಐ ಯು.ಪಿ. ವಿಪಿನ್ ನೇತೃತ್ವದ ಪೊಲೀಸರ ತಂಡ ಅಲ್ಲಿಗೆ ತೆರಳಿದಾಗ ಆರೋಪಿ ಸುನಿಲ್ ಅಲ್ಲೇ ಪಕ್ಕದ ಕಾರೊಂದರಲ್ಲಿ ಕುಳಿತಿದ್ದನು.

ಪೊಲೀಸರನ್ನು ಕಂಡಾಕ್ಷಣ ಆತ ಪಲಾಯನಗೈಯ್ಯಲೆತ್ನಿಸಿದನು. ತಕ್ಷಣ ಆತನನ್ನು ಸೆರೆಹಿಡಿದು ವಿಚಾರಿಸತೊಡಗಿದಾಗ ಉಂಟಾದ ಶಂಕೆ ಆಧಾರದಲ್ಲಿ ಅಲ್ಲೇ ಪಕ್ಕದ ಜನವಾಸವಿಲ್ಲದ ಮನೆಯನ್ನು ಅಬಕಾರಿ ತಂಡ ಮತ್ತು ಪೊಲೀಸರು ತಪಾಸಣೆ ನಡೆಸಿದಾಗ ಅಕ್ರಮ ಮದ್ಯ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಈ ಸಂಬಂಧ ವಶಪಡಿಸಲಾದ ಕಾರಿನ ನಂಬ್ರ ಅಸಲಿಯಲ್ಲವೆಂಬ ಶಂಕೆಯೂ ತನಿಖಾ ತಂಡಕ್ಕೆ ಉಂಟಾಗಿದೆ.

ಆ ಕಾರಿನ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಈ ಮಾಲುಗಳನ್ನು ಗೋವಾದಿಂದ ತರಲಾಗಿದೆಯೆಂದು ತನಿಖಾತಂಡ ತಿಳಿಸಿದೆ. ಈ ದಂಧೆಯಲ್ಲಿ ಮೈಲಾಟಿಯ ಸತೀಶ (28) ಎಂಬಾತ ಶಾಮೀಲಾಗಿ ರುವುದಾಗಿ ಸ್ಪಷ್ಟಗೊಂಡಿದೆಯೆಂದೂ ಆ ಹಿನ್ನೆಲೆಯಲ್ಲಿ ಆತನ ವಿರುದ್ಧವೂ ಅಬಕಾರಿ ತಂಡ ದೂರು ದಾಖಲಿಸಿದೆ. ಬಂಧಿತ ಆರೋಪಿ ಸುನಿಲ್ ಕುಮಾರ್ ಈ ಹಿಂದೆ ಪೆಟ್ರೋಲ್ ಬಂಕ್‌ನಲ್ಲಿ ದುಡಿಯುತ್ತಿದ್ದನು.

ಆಟೋ ರಿಕ್ಷಾದಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದ ವೇಳೆ ಆತನನ್ನು ಈ ಹಿಂದೆಯೂ ಬಂಧಿಸಲಾಗಿತ್ತು. ಬಳಿಕ ಇತ್ತೀಚೆಗೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನೆಂದು ಅಬಕಾರಿ ಅಧಿಕಾರಗಳು ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English