ಬಂಟ್ವಾಳ: ಗಣೇಶ ಹಬ್ಬ ಸಂಭ್ರಮದಿಂದ ಶಾಂತಿಯುತವಾಗಿ ಆಚರಣೆಯಾಗಬೇಕು, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನೀಡುವ ಸೂಚನೆಗಳನ್ನು ಸಂಘಟಕರು ಪಾಲಿಸಿ ಸಹಕರಿಸಬೇಕು ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಬೊರಸೆ ಹೇಳಿದ್ದಾರೆ.
ಮುಂಬರುವ ಗಣೇಶ ಚೌತಿ ಹಬ್ಬದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶುಕ್ರವಾರ ನಡೆದ ಬಂಟ್ವಾಳ ವೃತ್ತ ವ್ಯಾಪ್ತಿಯ ಗಣೇಶೋತ್ಸವ ಸಮಿತಿಗಳ ಮುಖ್ಯಸ್ಥರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಹಬ್ಬದ ಪೆಂಡಾಲ್ ಗಳನ್ನು ಅನಾಹುತಗಳು ನಡೆಯದಂತೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಬೇಕು, ವಿದ್ಯುತ್ ಸಂಪರ್ಕ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು, ಶಾರ್ಟ್ ಸರ್ಕ್ಯೂಟ್ ಆಗದಂತೆ ನಿಗಾವಹಿಸಬೇಕು, ಮುಂಜಾಗ್ರತಾ ಕ್ರಮವಾಗಿ ಡ್ರಮ್‌ಗಳಲ್ಲಿ ನೀರು ಹಾಗೂ ಮರಳು ಸಂಗ್ರಹಿಸಿಡಬೇಕೆಂದರು.
ಸಿಸಿ ಕ್ಯಾಮೆರಾ ಅಳವಡಿಸಬೇಕು, ಸಂಶಯಾಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳು ಕಂಡಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು, ದೇವರಿಗೆ ತೊಡಿಸುವ ಆಭರಣಗಳ ರಕ್ಷಣೆ ಕುರಿತಾಗಿ ಜಾಗ್ರತೆ ವಹಿಸಬೇಕು. ಸಂಘಟಕರೇ ದೇವರ ವಿಗ್ರಹಗಳಿಗೆ ಭದ್ರತೆ ನೀಡುವ ಜವಬ್ದಾರಿ ವಹಿಸಬೇಕು ಎಂದ ಅವರು ಪೊಲೀಸ್ ಇಲಾಖೆಯೂ ಸಹಕಾರ ನೀಡಲಿದೆ ಎಂದರು.
ಉತ್ಸವ ನಡೆಸುವ ಸ್ಥಳದಲ್ಲಿ ಹಾಗೂಮೆರವಣಿಗೆ ಸಾಗಿ ವಿಗ್ರಹ ವಿಸರ್ಜನೆ ಮಾಡುವ ಸ್ಥಳಗಳಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಇರುವಂತೆ ಸಂಘಟಕರು ನೋಡಿಕೊಳ್ಳಬೇಕು. ಇಂತಹಾ ಸ್ಥಳಗಳಲ್ಲಿ ಪವರ್ ಕಟ್ ಮಾಡದಂತೆ ಮೆಸ್ಕಾಂ ಇಲಾಖೆಗೂ ಪೊಲೀಸ್ ಇಲಾಖೆ ವತಿಯಿಂದ ಪತ್ರ ಬರೆಯುವುದಾಗಿಯೂ ಅವರು ತಿಳಿಸಿದರು. ವಿಗ್ರಹ ವಿಸರ್ಜನೆ ವೇಳೆ ಸಾಕಷ್ಟು ಎಚ್ಚರಿಕೆ ವಹಿಸಬೇಕು, ಜೀವರಕ್ಷಣೆಗಿರುವ ಜಾಕೆಟ್, ಹಗ್ಗವನ್ನು ಒದಗಿಸುವ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮೆರವಣಿಗೆಗಳಲ್ಲಿ ಭಾಗವಹಿಸುವ ಸ್ವಯಂ ಸೇವಕರ ಪಟ್ಟಿಯನ್ನು ಪೊಲೀಸ್ ಇಲಾಖೆಗೆ ನೀಡಬೇಕು, ಸ್ತಬ್ಧಚಿತ್ರಗಳೂ ಕೂಡ ಭಾವನೆಗಳನ್ನು ಕೆರಳಿಸುವಂತಿರದೆ, ಎಲ್ಲರ ಬದುಕಿಗೆ ಪ್ರೇರಣೆ ನೀಡುವಂತಿರಲಿ ಎಂದು ಸಲಹೆ ನೀಡಿದರಲ್ಲದೆ ಸ್ಥಬ್ಧಚಿತ್ರಗಳ ವಿಷಯಗಳ ಕುರಿತಾಗಿ ಸಂಘಟಕರು ಪೂರ್ವಭಾವಿಯಾಗಿ ಪರಿಶೀಲಿಸುವಂತೆ ಸೂಚಿಸಿದರು.
ಬಂಟ್ವಾಳ ಡಿವೈಎಸ್ಪಿ ರವೀಶ್ ಕುಮಾರ್, ಬಂಟ್ವಾಳ ವೃತ್ತನಿರೀಕ್ಷಕ ಬಿ.ಕೆ.ಮಂಜಯ್ಯ, ಠಾಣಾಧಿಕಾರಿಗಳಾದ ನಂದಕುಮಾರ್, ರಕ್ಷಿತ್ ಗೌಡ, ಪ್ರಕಾಶ್ ದೇವಾಡಿಗ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English