ದೆಹಲಿ: ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿದೆ ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕಿಡಿ ಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ಪಾಕಿಸ್ತಾನವು ಕಾಶ್ಮೀರದಲ್ಲಿ ಆತಂಕ ಸೃಷ್ಟಿಸುವುದಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೂ ನಮ್ಮೆಲ್ಲರಂತೆಯೇ ಜಮ್ಮು-ಕಾಶ್ಮೀರದ ಪರಿಸ್ಥಿತಿ ಬಗ್ಗೆ ಕಾಳಜಿ ಇದೆ. 2008ರಿಂದಲೂ ಕಾಶ್ಮೀರದ ಸ್ಥಿತಿ ಚೆನ್ನಾಗಿಲ್ಲ. ಆದರೆ ಯುಪಿಎ ಸರ್ಕಾರ ನಿರ್ಲಕ್ಷ್ಯ ಮಾಡುತ್ತಾ ಬಂತು. ಈಗ ಮೋದಿ ಅವರು ಸಮಸ್ಯೆ ಪರಿಹರಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದರು.
ಮೋದಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನದೊಂದಿಗೆ ಮಾತುಕತೆಗೆ ಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಹೋದರು, ಲಾಹೋರ್ ಗೆ ಹೋದರು. ಆದರೆ ಪಠಾಣ್ ಕೋಟ್ ದಾಳಿ ನಡೆಯಿತು. ರಾಜನಾಥ್ ಸಿಂಗ್ ಇಸ್ಲಾಮಾಬಾದ್ ಗೆ ಹೋದರು. ದುರದೃಷ್ಟ ಅಂದರೆ, ಮಾತುಕತೆ ಮೂಲಕ ಕಾಶ್ಮೀರದ ಹಿಂಸಾಚಾರ ಸಮಸ್ಯೆ ಬಗೆಹರಿಸಿಕೊಳ್ಳುವ ಅವಕಾಶವನ್ನ ಪಾಕಿಸ್ತಾನ ಪದೇ ಪದೇ ಕೈ ಚೆಲ್ಲುತ್ತಿದೆ ಎಂದು ಮೆಹಬೂಬ ಮುಫ್ತಿ ಹೇಳಿದರು.
ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕು ಅಂದರೆ ಪಾಕಿಸ್ತಾನ ಸರಿಯಾದ ರೀತಿಯಲ್ಲಿ ಸ್ಪಂದಿಸುವುದಕ್ಕೆ ಇದು ಸರಿಯಾದ ಸಮಯ. ಪ್ರತ್ಯೇಕತಾವಾದಿಗಳು ಮುಂದೆ ಬಂದು, ಅಮಾಯಕ ಯುವಕರ ಪ್ರಾಣವನ್ನು ಉಳಿಸುವುದಕ್ಕೆ ಪ್ರಯತ್ನಿಸಬೇಕು ಎಂದರು.
ಸಂಧಾನದ ಮೂಲಕ ಕಾಶ್ಮೀರ ಸ್ಥಿತಿಯಲ್ಲಿ ಸುಧಾರಣೆಯಾಗಬೇಕು. ಮಕ್ಕಳು ಪೊಲೀಸ್ ಸ್ಟೇಷನ್ ಗಳ ಮೇಲೆ ಕಲ್ಲೆಸೆಯುವುದು ನೋಡಿದರೆ ಒಬ್ಬ ತಾಯಿಯಾಗಿ ತುಂಬ ನೋವಾಗುತ್ತದೆ. ಕಲ್ಲೆ ಎಸೆಯುವುದರಿಂದ ಸಮಸ್ಯೆ ಪರಿಹಾರ ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಗುರುವಾರದ ಪತ್ರಿಕಾಗೋಷ್ಠಿಯಲ್ಲಿ ಸೇನೆಯ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಮುಫ್ತಿ, ಕರ್ಫ್ಯೂ ಹಾಕಿದ ನಂತರವೂ ಜನ ರಸ್ತೆಗೆ ಯಾಕೆ ಬರ್ತಾರೆ? ಮಕ್ಕಳು ಸೇನಾ ಕ್ಯಾಂಪ್ ಗೆ ಚಾಕೊಲೇಟ್ ತಗೋಳಕ್ಕೆ ಹೋಗ್ತಾರಾ? 15 ವರ್ಷದ ಹುಡುಗ ದಮ್ಹಾಲ್ ಹಂಜಿಪೋರ ಪೊಲೀಸ್ ಸ್ಟೇಷನ್ ಮೇಲೆ ದಾಳಿ ಮಾಡಿದನಲ್ಲಾ, ಅಲ್ಲಿಗೇನು ಹಾಲಿಗಾಗಿ ಹೋಗಿದ್ನಾ ಎಂದಿದ್ದರು.
ಈಗ ಕಾಶ್ಮೀರದಲ್ಲಿ ಸಾಯುತ್ತಿರುವವರ ಪೈಕಿ ಶೇ 95ರಷ್ಟು ಯುವಕರು, ಬಡ ಕುಟುಂಬಕ್ಕೆ ಸೇರಿದವರು. ಸೇನಾ ಕ್ಯಾಂಪ್ ಮೇಲೆ ದಾಳಿ ಮಾಡಿದ್ದರಿಂದ ಅವರನ್ನು ಕೊಲ್ಲಲಾಯಿತು. ಸದ್ಯದ ಸ್ಥಿತಿಯನ್ನ 2010ರಲ್ಲಿ ಇದ್ದ ಸ್ಥಿತಿಗೆ ಹೋಲಿಸುವುದಕ್ಕೆ ಸಾಧ್ಯವಿಲ್ಲ ಎಂದರು.
ಜುಲೈ 8ರಂದು ಭಯೋತ್ಪಾದಕ ಬುಹ್ರಾನ್ ವನಿ ಎನ್ ಕೌಂಟರ್ ಆದ ನಂತರ, ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಬುಗಿಲೆದ್ದಿತ್ತು. ಅದಾದ ಮೇಲೆ ಇದೇ ಮೊದಲ ಬಾರಿಗೆ ಮೆಹಬೂಬ ಮುಫ್ತಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ವಾರದ ಹಿಂದಷ್ಟೇ ಜಮ್ಮು-ಕಾಶ್ಮೀರದಿಂದ ಬಂದಿದ್ದ ವಿರೋಧ ಪಕ್ಷದ ನಾಯಕ ಒಮರ್ ನೇತೃತ್ವದ ನಿಯೋಗದ ಜತೆಗೆ ಮೋದಿ ಮಾತುಕತೆ ನಡೆಸಿದ್ದರು.
ಮೆಹಬೂಬ ಮುಫ್ತಿ ಭೇಟಿ ನಂತರ ಮಾತನಾಡಿದ ಮೋದಿ, ಕಣಿವೆ ರಾಜ್ಯದ ಸದ್ಯದ ಸ್ಥಿತಿಗೆ ತೀವ್ರ ಕಳವಳ ಹಾಗೂ ಕಾಳಜಿ ವ್ಯಕ್ತಪಡಿಸಿದರು. ಜಮ್ಮು-ಕಾಶ್ಮೀರದ ಎಲ್ಲ ರಾಜಕೀಯ ಪಕ್ಷಗಳು ಒಟ್ಟಿಗೆ ಕೆಲಸ ಮಾಡಿ, ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ರಾಜ್ಯವು ಸಹಜ ಸ್ಥಿತಿಗೆ ಮರಳಬೇಕು ಎಂದರು.
Click this button or press Ctrl+G to toggle between Kannada and English