ಬದಿಯಡ್ಕ: ತುಳು ಭಾಷೆಯ ವಿವಿಧ ಸಮ್ಮೇಳನಗಳು ಆಯೋಜನೆಗೊಳ್ಳುವ ಮೂಲಕ ತುಳುವರಲ್ಲಿ ಭಾಷಾಭಿಮಾನ ಬೆಳೆದು ಅದರ ಬಳಕೆಯ ಅಗತ್ಯತೆಯ ಬಗ್ಗೆ ಸಾಮೂಹಿಕ ಅರಿವು ಮೂಡತೊಡಗಿದ್ದು ಉತ್ತಮ ಬೆಳವಣಿಗೆ.ಅಚ್ಚುಕಟ್ಟುತನ,ಸಂಸ್ಕಾರಯುತ ಜೀವನ ಶೈಲಿ ವಿಶಾಲ ತುಳುನಾಡಿನ ಅಸ್ಮಿತತೆಯ ದ್ಯೋತಕವೆಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಭಿಪ್ರಾಯ ವ್ಯಕ್ತಪಡಿಸಿದರು.
ತುಳುವೆರೆ ಆಯನೊ ಸಮಿತಿಯ ಆಶ್ರಯದಲ್ಲಿ ಡಿ.9 ರಿಂದ 13ರ ವರೆಗೆ ಬದಿಒಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನೊದ ಪೂರ್ವಭಾವಿಯಾಗಿ ಆಯೋಜಿಸಿರುವ ತುಳುನಾಡ ತಿರ್ಗಾಟೊ ರಥಯಾತ್ರೆಗೆ ಭಾನುವಾರ ಬಸ್ರೂರು ತುಳುವೇಶ್ವರ ಕ್ಷೇತ್ರ ಪರಿಸರದಲ್ಲಿ ಚಾಲನೆ ನೀಡಿ ಬಳಿಕ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದಿನ ಯುವ ಸಮೂಹಕ್ಕೆ ತುಳು ನಾಡಿನ ಮೂಲ ಪರಂಪರೆ,ಜೀವನ ಶೈಲಿ,ನಡೆದು ಬಂದ ಸುಧೀರ್ಘ ಇತಿಹಾಸದ ಅರಿವಿನೊಂದಿಗೆ ಮುಂದಿನ ಭವಿಷ್ಯತ್ ಸವಾಲುಗಳ ಬಗೆಗಿನ ಗೊಂದಲಗಳನ್ನು ಪರಿಹರಿಸುವ ಉದ್ದೇಶದಿಂದ ಆಯೋಜಿಸಿರುವ ವಿಶ್ವ ತುಳುವೆರೆ ಆಯನೊ ಸಮಗ್ರ ವಿಶಾಲ ತುಳು ನಾಡಿನ ಜನರ ಧ್ವನಿಯಾಗಿ ಮೂಡಿಬರಲಿದೆ. ಸ್ಥಳೀಯವಾಗಿ ವಿವಿಧ ಜಾತಿ,ಮತ,ಪಂಥಗಳೊಂದಿಗೆ ಹರಡಿ ವಿಸ್ತಾರಗೊಂಡಿರುವ ತುಳುನಾಡಿನ ಪ್ರತಿಯೊಬ್ಬರೂ ತುಳುವರಾಗಿದ್ದು,ಈ ಬಗೆಗಿನ ಹೆಮ್ಮೆ ನಮ್ಮನ್ನು ಸದಾ ಸಂರಕ್ಷಿಸುತ್ತದೆಯೆಂದು ಅವರು ತಿಳಿಸಿದರು.ಪ್ರಾಚೀನವಾದ ತುಳು ಲಿಪಿಯ ಬಳಕೆ ನಾಶವಾಗಿದ್ದು ಮತ್ತೆ ಲಿಪಿಯನ್ನು ಬಳಕೆಗೆ ತಂದು ಭಾಷೆಯೊಡನೆ ಲಿಪಿಯನ್ನೂ ಬೆಳೆಸುವ ಯತ್ನಗಳಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮಕ್ಕೆ ತುಳುನಾಡ ಪತಾಕೆಯನ್ನು ಹಸ್ತಾಂತರಿಸಿ ಮಾತನಾಡಿದ ಬಸ್ರೂರು ತುಳುವೇಶ್ವರ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಮಾತನಾಡಿ,ನಮ್ಮ ಸಂಸ್ಕಾರ,ಸಂಸ್ಕೃತಿಗಳ ಪುನರುತ್ಥಾನದಲ್ಲಿ ಪೂರ್ವಜರು ನೀಡಿದ ಜಾನಪದ,ಆರಾಧನೆ ಸಹಿತ ಇತರ ಆಚರಣೆಗಳು ವಿಶ್ವ ಮಟ್ಟದಲ್ಲೇ ಕರಾವಳಿ ಜನರನ್ನು ವಿಶಿಷ್ಟವಾಗಿ ಗುರುತಿಸುವಂತೆ ಮಾಡಿದೆ.ಕರಾವಳಿಯ ತುಳುನಾಡಿನ ಜನರು ಎಲ್ಲೇ ಇದ್ದರೂ ಅಲ್ಲೊಂದು ತುಳು ಸಂಸ್ಕೃತಿಯ ಬೀಜವನ್ನು ಬಿತ್ತಿ ಬೆಳೆಸುತ್ತಿರುವುದು ವಿಶೇಷವಾಗಿದ್ದು,ಪ್ರಸ್ತುತ ಸಂದರ್ಭದಲ್ಲಿ ಯುವ ಸಮೂಹ ಇದನ್ನು ಮರೆಯುತ್ತಿರುವುದು ಆತಂಕಕಾರಿಯಾಗಿದೆ.ಈ ನಿಟ್ಟಿನಲ್ಲಿ ಜಾಗೃತಿ, ಸಂಶೋಧನೆ, ಸಂಬೋಧನೆಗಳ ದೃಷ್ಟಿಯಲ್ಲಿ ಆಯೋಜಿಸಿರುವ ತುಳುವೆರೆ ಆಯನೊ ಯಶಸ್ವಿಯಾಗಲೆಂದು ಹಾರೈಸಿದರು.
ವಿಶ್ವ ತುಳುವೆರೆ ಆಯನೊದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುದಾಬಿ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಸಂಶೋಧಕ,ನಿವೃತ್ತ ಮುಖ್ಯೋಪಾಧ್ಯಾಯ ಕನರಾಡಿ ವಾದಿರಾಜ ಭಟ್,ಕೊಲ್ಲೂರು ಮುಕಾಂಬಿಕಾ ಕ್ಷೇತ್ರದ ಮಾಜಿ ಧರ್ಮದರ್ಶಿ ಕೃಷ್ಣ ಪ್ರಸಾದ ಅಡ್ಯಂತಾಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ನಿಟ್ಟೆ ಶಶಿಧರ ಶೆಟ್ಟಿ,ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಂದಾಪುರ ತಾಲೂಕು ಯೋಜನಾಧಿಕಾರಿ ಅಮರ್ ಪ್ರಸಾದ್ ಶೆಟ್ಟಿ,ವಿಶ್ವ ತುಳುವೆರೆ ಆಯನೊದ ಸಂಚಾಲಕ ಡಾ.ರಾಜೇಶ್ ಆಳ್ವ ಬದಿಯಡ್ಕ,ತುಳುವೆರೆ ಆಯನೊದ ಭೂತಾರಾಧನೆ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ತುಳುವೆರೆ ಆಯನೊದ ಬಹುಭಾಷಾ ಸಂಗಮದ ಅಧ್ಯಕ್ಷ ರವಿಕಾಂತ ಕೇಸರಿ ಕಡಾರು,ಕೃಷ್ಣ ಸ್ವಾಮಿಕೃಪಾ ಮೊದಲಾದವರು ಉಪಸ್ಥಿತರಿದ್ದರು.ಮಹಾಲಿಂಗೇಶ್ವರ ಕ್ಷೇತ್ರದ ರಾಮಕೃಷ್ಣ ಹೆಗ್ಡೆ ಬಸ್ರೂರು ಸ್ವಾಗತಿಸಿ,ತುಳು ಆಯನೊದ ಸಂಚಾಲಕ ಹರ್ಷ ರೈ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲಗುತ್ತು ವಂದಿಸಿದರು.
ಕಾರ್ಯಕ್ರಮಕ್ಕೆ ಮೊದಲು ತುಳುವೇಶ್ವರನ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿ,ಮಹಾಲಿಂಗೇಶ್ವರನಿಗೆ ವಿಶೇಷ ಸೇವೆ ನಡೆಸಿ,ಬಳಿಕ ತುಳು ನಾಡ ಧ್ವಜವನ್ನು ಹಸ್ತಾಂತರಿಸಿ ತುಳುನಾಡ ತಿರ್ಗಾಟ ರಥದ ಸಂಚಾರಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.ರಥವು ತುಳುನಾಡಿನಾದ್ಯಂತ ವಿವಿಧ ಕೇಂದ್ರಗಳಲ್ಲಿ ಸಂಚರಿಸಿ,ಡಿ.9 ರಂದು ತುಳುನಾಡಿನ ಗಡಿಯಾದ ಕಾಸರಗೋಡು ಸಮೀಪದ ಪನತ್ತಡಿ ಬಳಿಯ ತುಳು ಬನದಲ್ಲಿ ಸಮಾರೋಪಗೊಂಡು ತುಳು ಸಮ್ಮೇಳನ ನಡೆಯುವ ಬದಿಯಡ್ಕಕಕ್ಕೆ ಆಗಮಿಸಲಿದೆ.
Click this button or press Ctrl+G to toggle between Kannada and English