ವೇಣೂರು: ಪಂಚಾಯತ್‌ರಾಜ್ ವ್ಯವಸ್ಥೆ ತಿದ್ದುಪಡಿ ಬಳಿಕ ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯ ವೇಗ ಪಡೆದುಕೊಂಡಿದೆ. ಅಲ್ಲದೆ ಇಲ್ಲಿನ ಜನತೆ ಸಾಮಾಜಿಕ ಹಾಗೂ ಸದೃಢ ಬದುಕು ಕಂಡಿದ್ದಾರೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಸೋಮವಾರ ದ.ಕ. ಜಿ.ಪಂ. ಮಂಗಳೂರು, ತಾ.ಪಂ. ಬೆಳ್ತಂಗಡಿ, ಪಂಚಾಯತ್ ರಾಜ್ ಎಂಜಿನಿಯರ್ ಉಪವಿಭಾಗ ಬೆಳ್ತಂಗಡಿ ಹಾಗೂ ಗ್ರಾ.ಪಂ. ನಾರಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಾರಾವಿ ಗ್ರಾ.ಪಂ.ನ ನೂತನ ಪಂಚಾಯತ್ ಕಟ್ಟಡ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅಭಿವೃದ್ಧಿ ಕಾರ್ಯಗಳಿಗೆ ಇಚ್ಛಾಶಕ್ತಿ ಮುಖ್ಯ. ಅದು ಇಲ್ಲಿ ಅನಾವರಣಗೊಂಡಿದೆ. ನಾಲ್ಕೈದು ಜನ ಜಾಗದ ಪಟ್ಟಾದಾರರಿದ್ದ ಗ್ರಾಮದಲ್ಲಿ ಇಂದು ಸಾವಿರಾರು ಜನರಿದ್ದಾರೆ. ಕೇವಲ ಶ್ರೀಮಂತರ ಕೈಯಲ್ಲಿದ್ದ ಪಂಚಾಯತ್ ಆಡಳಿತ ವ್ಯವಸ್ಥೆ ಇಂದು ಜನಸಾಮಾನ್ಯರ ಕೈಗೂ ಸಿಗುವಂತಾಗಿದೆ.
ಜನತೆ ಸರಕಾರದ ಸೇವೆಗಳನ್ನು ನೇರವಾಗಿ ಪಂ.ನಿಂದ ಪಡೆ ಯುವಂತಾಗಬೇಕು. ಪಂಚಾಯತ್ ವ್ಯವಸ್ಥೆ ಇನ್ನೂ ಹಂತಹಂತವಾಗಿ ಸದೃಢವಾಗಬೇಕಿದೆ ಎಂದರು.ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಮಾತನಾಡಿ, ಜನಸಾಮಾನ್ಯರ ಭಾವನೆಗಳನ್ನು ಸರಕಾರಕ್ಕೆ ಮುಟ್ಟಿಸುವ ಕೆಲಸ ಪಂಚಾಯತ್‌ರಾಜ್ ವ್ಯವಸ್ಥೆಯಿಂದ ನಡೆಯಬೇಕು ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಪ್ರತಿಯೊಂದು ಗ್ರಾಮ ಅಭಿವೃದ್ಧಿ ಕಂಡಾಗ ರಾಮರಾಜ್ಯದ ಕನಸು ನನಸಾಗುತ್ತದೆ. ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ನೇರವಾಗಿ ಹಲವು ಅನುದಾನಗಳು ಗ್ರಾ.ಪಂ.ಗೆ ಬರುತ್ತಿವೆ. ಹೀಗಾಗಿ ಪಂಚಾಯತ್ ಅಧ್ಯಕ್ಷರೇ ಗ್ರಾಮದ ಸಿಎಂ. ಹಕ್ಕುಪತ್ರದ ವಿತರಣೆ ಗೊಂದಲದಿಂದ ಬಡಜನತೆ ವಸತಿ ಯೋಜನೆಯಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಕಂದಾಯ ಇಲಾಖಾಧಿಕಾರಿಗಳು ಗಮನ ಹರಿಸಬೇಕು ಎಂದರು.
ನಾರಾವಿ ಗ್ರಾ.ಪಂ. ಅಭಿವೃದ್ಧಿ ಕಾರ್ಯ ಗಳಿಗೆ 3 ಲ. ರೂ. ಅನುದಾನ ಒದಗಿಸಿಕೊಡುವುದಾಗಿ ಸಂಸದ ನಳಿನ್ ಭರವಸೆ ನೀಡಿದರು. ಪಂಚಾಯತ್‌ರಾಜ್ ತಿದ್ದುಪಡಿಯಿಂದ ಅಧಿಕಾರದ ಧ್ರುವೀಕರಣ ನಡೆದಿದೆ. ನಾರಾವಿ ಗ್ರಾ.ಪಂ. ಅಭಿವೃದ್ಧಿ ಪಥದಲ್ಲಿ ಪ್ರಬಲ ಹೆಜ್ಜೆ ಇಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಂಗಳೂರು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ದ.ಕ. ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಬೆಳ್ತಂಗಡಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ತಾ.ಪಂ. ಸದಸ್ಯೆ ರೂಪಲತಾ ಮೊದಲಾದವರು ಉಪಸ್ಥಿತರಿದ್ದರು.
ಶಾಸಕ ಕೆ. ವಸಂತ ಬಂಗೇರ ಹಾಗೂ ಬೆಳ್ತಂಗಡಿ ಕೃಷಿಕ ಸಮಾಜದ ವತಿಯಿಂದ ನಾರಾವಿ ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ ಹಾಗೂ ಸದಸ್ಯರನ್ನು ಸಮ್ಮಾನಿಸಲಾಯಿತು.
ಗ್ರಾ.ಪಂ. ಕಟ್ಟಡಕ್ಕೆ ಆರ್ಥಿಕ ಸಹಾಯ ನೀಡಿದ ದಾನಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. 94ಸಿ ಹಕ್ಕುಪತ್ರ, ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ಪ್ರಮಾಣಪತ್ರ ಮತ್ತು ಬಡ ಕುಟುಂಬದ ಮಹಿಳೆಯರಿಗೆ ಸೀರೆ ವಿತರಣೆ ನಡೆಯಿತು. ಪಂಚಾಯತ್ ಸದಸ್ಯರು ಹಾಗೂ ಸಿಬಂದಿ ಸಹಕರಿಸಿದರು. ನಾರಾವಿ ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿ ಪಿಡಿಒ ನಿರ್ಮಲ್ ಕುಮಾರ್ ವಂದಿಸಿದರು.
Click this button or press Ctrl+G to toggle between Kannada and English