ಸಿಐಡಿ ತನಿಖೆಯಿಂದ ನ್ಯಾಯ ಸಿಗದೇ ಹೋದರೆ ಸುಷ್ಮಾ ಸ್ವರಾಜ್‌ ಅವರ ಮೂಲಕ ಸಿಬಿಐ ತನಿಖೆಗೆ ಆಗ್ರಹಿಸಲಾಗುವುದು: ಗೀತಾ ಭಾಸ್ಕರ್‌

11:25 AM, Tuesday, August 30th, 2016
Share
1 Star2 Stars3 Stars4 Stars5 Stars
(No Ratings Yet)
Loading...

Baskar-Shetty-murder-caseಕಾಪು: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣವನ್ನು ನಡೆಸುತ್ತಿರುವ ಸಿಐಡಿ ತಂಡದ ತನಿಖೆಯಲ್ಲಿ ವಿಶ್ವಾಸವಿದೆ, ಯಾವುದೇ ಒತ್ತಡ ರಹಿತವಾಗಿ ತನಿಖೆ ನಡೆಯುತ್ತಿದೆ ಎನ್ನುವ ನಂಬಿಕೆ ಇದೆ. ಸಿಐಡಿ ತನಿಖೆಯಿಂದ ಸೂಕ್ತ ನ್ಯಾಯ ಸಿಗದೇ ಹೋದರೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಅವರ ಮೂಲಕ ಒತ್ತಡ ಹೇರಿ ಸಿಬಿಐ ತನಿಖೆಗೆ ಆಗ್ರಹಿಸಲಾಗುವುದು ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಯ ಮಹಿಳಾ ಅಧ್ಯಕ್ಷೆ ಗೀತಾ ಭಾಸ್ಕರ್‌ ಶೆಟ್ಟಿ ಪುಣೆ ಅವರು ತಿಳಿಸಿದ್ದಾರೆ.

ಅವರು ಸೋಮವಾರ ಕಟಪಾಡಿ ಸರಕಾರಿ ಗುಡ್ಡೆಯಲ್ಲಿರುವ ಕೆ. ಭಾಸ್ಕರ್‌ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ, ಅವರ ತಾಯಿ ಗುಲಾಬಿ ಶೆಟ್ಟಿ ಬಳಿ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.

ಪ್ರಕರಣದ ಕುರಿತು ಮುಂದೆ ಯಾವ ರೀತಿಯ ಹೆಜ್ಜೆ ಇಡಬೇಕು ಎನ್ನುವುದರ ಬಗ್ಗೆ ಮನೆಯವರೊಂದಿಗೆ ಮಾತುಕತೆ ನಡೆಸಲಾಗಿದೆ. ಆರೋಪಿಗಳನ್ನು ರಕ್ಷಿಸಲಾಗುತ್ತಿದೆ ಎನ್ನುವ ದೂರು ಕೇಳಿ ಬಂದಿವೆ. ಅವಶ್ಯ ಬಿದ್ದರೆ ಈ ಬಗ್ಗೆ ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಲು ಮಾನವ ಹಕ್ಕು ಸಂಸ್ಥೆ ಭಾಸ್ಕರ್‌ ಶೆಟ್ಟಿ ಅವರ ಕುಟುಂಬಕ್ಕೆ ನೆರವಾಗಲಿದೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದೇ ನಮ್ಮ ಮುಖ್ಯ ಗುರಿ ಎಂದರು.

ಭಾಸ್ಕರ್‌ ಶೆಟ್ಟಿ ನಾಪತ್ತೆ ಪ್ರಕರಣ, ಹತ್ಯೆ,ಆರೋಪಿಗಳ ಬಂಧನ,ಪ್ರಕರಣದ ತನಿಖೆ ಕುರಿತು ಜನರು ದಿನಕ್ಕೊಂದು ಮಾತನಾಡುತ್ತಿದ್ದಾರೆ. ಪ್ರಕರಣದಿಂದ ಸಮಸ್ತ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ.

ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆ ರಾಜ್ಯಾಧ್ಯಕ್ಷ ರೋಹಿತ್‌ ಕುಮಾರ್‌ ಕಟೀಲು ಅವರ ದೂರಿನ ಮೇರೆಗೆ, ರಾಷ್ಟ್ರಾಧ್ಯಕ್ಷ ಚಂದ್ರಕಾಂತ ಮೋರೆ ಅವರ ಸೂಚನೆ ಮೇರೆಗೆ ಇಲ್ಲಿಗೆ ಆಗಮಿಸಿದ್ದೇವೆ. ಇಲ್ಲಿನ ಸಮಸ್ಯೆ, ಪ್ರಕರಣ ಸಾಗುತ್ತಿರುವ ಹಾದಿ, ತನಿಖೆ ವಿವರ ಇತ್ಯಾದಿಗಳೆಲ್ಲವನ್ನೂ ಮಾನವ ಹಕ್ಕು ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಿಗೆ ನೀಡಲಿದ್ದೇವೆ. ಅಗತ್ಯ ಬಿದ್ದರೆ ಅವರು ಕೂಡ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಸಾಧ್ಯತೆಗಳಿವೆ ಎಂದು ಗೀತಾ ಬಿ. ಶೆಟ್ಟಿ ಹೇಳಿದರು.

ತನ್ನ ಮಗಳಿಗೆ (ರಾಜೇಶ್ವರಿ) ಗಂಡನಿಂದ (ಭಾಸ್ಕರ್‌ ಶೆಟ್ಟಿ) ಕಿರುಕುಳ ಉಂಟಾಗುತ್ತಿತ್ತು. ಆತ ದುಬೈಯಲ್ಲಿ ಮತ್ತೂಬ್ಬಳೊಂದಿಗೆ ಸಂಬಂಧ ಇರಿಸಿಕೊಂಡಿದ್ದ. ಆತನ ನಡವಳಿಕೆಯೇ ಸರಿಯಿಲ್ಲ ಎಂದು ರಾಜೇಶ್ವರಿ ಶೆಟ್ಟಿಯ ತಾಯಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಹಾಗೆ ಕಿರುಕುಳ ಕೊಟ್ಟಿದ್ದರೆ ಭಾಸ್ಕರ ಶೆಟ್ಟಿ ಅವರ ವಿರುದ್ಧ ದೂರು ನೀಡಬಹುದಿತ್ತು.

ಮಹಿಳಾ ಆಯೋಗ, ಪೊಲೀಸ್‌ ಇಲಾಖೆ ಹೀಗೆ ಎಲ್ಲಿಗೂ ದೂರು ನೀಡದೆ ಆತ್ಮರಕ್ಷಣೆಗಾಗಿ ಪೆಪ್ಪರ್‌ ಹುಡಿ ಎರಚಿ, ಮಗನೊಂದಿಗೆ ಸೇರಿ ಕೊಂದಿದ್ದಾರೆ ಎಂದು ಹೇಳುವ ಮೂಲಕ ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಗೀತಾ ಶೆಟ್ಟಿ ತಿಳಿಸಿದರು.

ಸಂಸ್ಥೆಯ ರಾಜ್ಯಾಧ್ಯಕ್ಷ ರೋಹಿತ್‌ ಕುಮಾರ್‌ ಕಟೀಲು, ಜಿಲ್ಲಾಧ್ಯಕ್ಷ ಉದಯ್‌ ಕುಮಾರ್‌ ಶೆಟ್ಟಿ ಇನ್ನ, ಸಮಾಜರತ್ನ ಕೆ. ಲೀಲಾಧರ್‌ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ಕುರ್ಕಾಲು ದಿನಕರ ಶೆಟ್ಟಿ, ಕರವೇ ಜಿಲ್ಲಾಧ್ಯಕ್ಷ ಸಂತೋಷ್‌ ಶೆಟ್ಟಿ ಪಂಜಿಮಾರು ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English