ಮಂಗಳೂರು: ಪಂಪ್‌ವೆಲ್‌ನಿಂದ ತಲಪಾಡಿ ವರೆಗಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ಚತುಷ್ಪಥ ರಸ್ತೆ ಹಾಗೂ ವಿಸ್ತರಣೆ ಕಾಮಗಾರಿಯಿಂದ ವಾಹನಗಳು ಸಾಗಲು ಮಾತ್ರವಲ್ಲ, ಸುತ್ತಮುತ್ತಲಿನ ಜನರಿಗೂ ಸಹಾಯಕವಾಗಬೇಕು.
ಹೆದ್ದಾರಿಗಾಗಿ ಸುಮಾರು 780 ಕೋ.ರೂ. ವ್ಯಯಿಸುತ್ತಿರುವಾಗ ಸಾರ್ವಜನಿಕರ ಹಿತದೃಷ್ಟಿಯಿಂದ 10 ಕೋ.ರೂ.ಗಳಲ್ಲಿ ಸರ್ವಿಸ್ ರಸ್ತೆ, ಪ್ರಮುಖ ಜಂಕ್ಷನ್‌ಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ಪ್ರಾಧಿಕಾರ ಮುಂದಾಗಬೇಕು ಎಂದು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆಯಿಂದ ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಲಾದ ಸಭೆಯಲ್ಲಿ ಮಾತನಾಡಿದ ಅವರು, ರಸ್ತೆ ವಿಸ್ತರಣೆಯಾದಂತೆ ಜನರಿಗೆ ರಸ್ತೆ ದಾಟಲು ಸಾಕಷ್ಟು ಸಮಸ್ಯೆಗಳಾಗುತ್ತವೆ. ಅಲ್ಲದೇ ಕೆಲವೆಡೆ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹೆದ್ದಾರಿಯ ಪ್ರಮುಖ ಜಂಕ್ಷನ್‌ಗಳಾದ ಎಕ್ಕೂರು, ಕಲ್ಲಾಪು, ಕುಂಪಲ, ಕೋಟೆಕಾರು ಹಾಗೂ ತೊಕ್ಕೊಟ್ಟುಗಳಲ್ಲಿ ಸಾರ್ವಜನಿಕರು ರಸ್ತೆ ದಾಟಲು ಅನುಕೂಲವಾಗುವಂತೆ ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕು.
ಜಿಲ್ಲೆಯ ಇತರ ಕೆಲವೆಡೆ ಓವರ್ ಬ್ರಿಡ್ಜ್ನ ಕೆಳರಸ್ತೆಯಲ್ಲಿ ಮಳೆ ನೀರು ನಿಲ್ಲುವ ಸಮಸ್ಯೆಗಳಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಿರ್ಮಾಣಗೊಳ್ಳುವ ಓವರ್‌ಬ್ರಿಡ್ಜ್ಗಳ ಕೆಳರಸ್ತೆಗಳಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಅಪಘಾತ ವಲಯಗಳಲ್ಲಿ ಬ್ಯಾರಿಕೇಡ್ ಬಳಸುವ ವ್ಯವಸ್ಥೆ ನಡೆಯಬೇಕು. ಸಂಪರ್ಕ ರಸ್ತೆ ಸರಿಪಡಿಸುವಲ್ಲಿ ಹಾಗೂ ಸೂಚನಾ ಫಲಕಗಳನ್ನು ಅಳವಡಿಸುವಲ್ಲಿ ಕೂಡ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಹಾಯಕ ಆಯುಕ್ತ ಡಾ| ಅಶೋಕ್ ಭೂಸ್ವಾಧೀನದ ಬಗ್ಗೆ ಮಾಹಿತಿ ನೀಡಿದಾಗ ಸ್ಪಂದಿಸಿದ ಸಚಿವರು, ರಸ್ತೆ ನಿರ್ಮಾಣದ ಬಳಿಕ ಜನರಿಗೆ ಖುಷಿಯಾಗಬೇಕೇ ಹೊರತು ಅದರಿಂದ ಅವರಿಗೆ ತೊಂದರೆಯಾಗಬಾರದು. ಹೆದ್ದಾರಿ ಅಗಲಗೊಳಿಸುವ ಕಾರ್ಯವೇನೋ ನಡೆಯುತ್ತಿದೆಯಾದರೂ ಜನರಿಗೆ ಅಗತ್ಯವಾಗಿರುವ ಸರ್ವಿಸ್ ರಸ್ತೆಧಿಗಳನ್ನು ಮಾತ್ರ ಎಲ್ಲಿಯೂ ನಿರ್ಮಾಣ ಮಾಡಿಲ್ಲ.
ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಕೆಲವೆಡೆ ರಸ್ತೆಗಳಲ್ಲಿ ಸರ್ವಿಸ್ ರಸ್ತೆಯ ಬೋರ್ಡ್ ಹಾಕಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ. ತಲಪಾಡಿ ಬಳಿ ಟೋಲ್ ಗೇಟ್ ಅನ್ನು 300 ಮೀಟರ್ ಮುಂದಕ್ಕೆ ನಿರ್ಮಾಣ ಮಾಡಿದ್ದು, ಇಲ್ಲಿ ಸರ್ವಿಸ್ ರಸ್ತೆಯನ್ನೇ ನಿರ್ಮಿಸದೆ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುವುದು ಸರಿಯಲ್ಲ. ಸ್ಥಳೀಯರಿಗೆ ಉಚಿತ ವ್ಯವಸ್ಥೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಹೇಳಿದರು.
ಸುರೇಶ್ ಆಳ್ವ, ತೊಕ್ಕೊಟ್ಟಿನಲ್ಲಿ ಕಟ್ಟಡವೊಂದನ್ನು ಒಡೆದಿದೆಯಾದರೂ ಪರಿಹಾರ ಮಾತ್ರ ಒದಗಿಸಿಲ್ಲ. ತಲಪಾಡಿಯಲ್ಲಿ ಫೈವ್ ಸ್ಟಾರ್ ಹೊಟೇಲ್‌ನಂತೆ ಟೋಲ್‌ಗೇಟ್ ನಿರ್ಮಾಣ ಮಾಡಿದ್ದಾರಾದರೂ ಸ್ಥಳೀಯರಿಗೆ ಬೇಕಾಗುವ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ದೂರಿದರು.
ರೈತರಿಂದ ಕಡಿಮೆ ದರದಲ್ಲಿ ಭೂಮಿ ಖರೀದಿಸುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅದನ್ನು ನವಯುಗ್ ಕನ್‌ಸ್ಟ್ರಕ್ಷನ್ ಸಂಸ್ಥೆಯವರಿಗೆ ನೀಡಿ ಅಲ್ಲಿ ಟೋಲ್‌ಗೇಟ್ ನಿರ್ಮಿಸಿ ಶುಲ್ಕ ಪಡೆಯುವ ಮೂಲಕ ದಂಧೆ ನಡೆಸುತ್ತಿದ್ದು, ರೈತರಿಗೆ ಮೋಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಹೆದ್ದಾರಿಗೆ ರಸ್ತೆ ಭೂಸ್ವಾಧೀನದ ಸಂದರ್ಭ ಮಾರುಕಟ್ಟೆ ದರವನ್ನೇ ನಿಗದಿಪಡಿಸಬೇಕು ಎಂಬ ಆಗ್ರಹ ಹಲವರಿಂದ ಸಭೆಯಲ್ಲಿ ವ್ಯಕ್ತವಾಯಿತು.
ಭೂಸ್ವಾಧೀನಕ್ಕೆ ಕೆಲವೆಡೆ ಆಕ್ಷೇಪವಿರುವ ಬಗ್ಗೆ ಹೆದ್ದಾರಿ ನಿರ್ಮಾಣ ಇಲಾಖೆ ಅಧಿಕಾರಿ ಸ್ಯಾಮಸನ್ ತಿಳಿಸಿದಾಗ, ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ| ಜಗದೀಶ್, ಭೂಮಿ ಒತ್ತುವರಿಗೆ ಆಕ್ಷೇಪ ಇರುವ ಕುರಿತ ವಿವರ ನೀಡಲು ಆದೇಶಿಸಿದರು. ಅಲ್ಲದೇ ಸರ್ವಿಸ್ ರಸ್ತೆ ಆಗದ ಹಿನ್ನೆಲೆಯಲ್ಲಿ ಸ್ಥಳೀಯ ವಾಹನಗಳಿಂದ ಟೋಲ್‌ಗೇಟ್ ಶುಲ್ಕ ಪಡೆಯುವುದಕ್ಕೆ ಸಂಬಂಧಿಸಿ ಆರ್‌ಟಿಒ ಅಧಿಕಾರಿಗಳ ಮೂಲಕ ಅಲ್ಲಿನ ಸ್ಥಳೀಯರ ವಾಹನ ಸಂಖ್ಯೆ ಗುರುತಿಸಿ ಅವರಿಗೆ ಪಾಸ್ ವ್ಯವಸ್ಥೆ ಅಥವಾ ವಿನಾಯಿತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು ಹಾಗೂ ಇತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English