ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ಟ್ಯಾಂಕರ್‌-ಮಿನಿ ಲಾರಿ- ಬಸ್‌ ನಡುವೆ ಭೀಕರ ಅಪಘಾತ

12:12 PM, Wednesday, August 31st, 2016
Share
1 Star2 Stars3 Stars4 Stars5 Stars
(No Ratings Yet)
Loading...

serial-accidentಉಪ್ಪಿನಂಗಡಿ/ಪುತ್ತೂರು: ರಾ.ಹೆ. 75ರ ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ಮಂಗಳವಾರ ನಸುಕಿನ ವೇಳೆ ಟ್ಯಾಂಕರ್‌-ಮಿನಿ ಲಾರಿ- ಬಸ್‌ ನಡುವಿನ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.

ಮಿನಿ ಲಾರಿ ಚಾಲಕ ಮೈಸೂರು ಮೂಲದ ನಿವಾಸಿ ಪುರಂ ಪಾಷಾ (32), ಕ್ಲೀನರ್‌ ಹಾಸನದ ರಾಮ ಅಲಿಯಾಸ್‌ ರಮೇಶ್‌ (40) ಮೃತಪಟ್ಟವರು. ಪ್ರಯಾಣಿಕ ಶರೀಫ್‌ ಗಾಯಾಳು.

ಮಂಗಳವಾರ ನಸುಕಿನ ಐದು ಗಂಟೆಗೆ ಮಂಗಳೂರಿನಿಂದ ಹಾಸನದತ್ತ ಸಂಚರಿಸುತ್ತಿದ್ದ (407) ಮಿನಿಲಾರಿಗೆ ನೀರಕಟ್ಟೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಟ್ಯಾಂಕರ್‌ ಢಿಕ್ಕಿಯಾಗಿದೆ. ಈ ಸಂದರ್ಭ ಲಾರಿ ಚಾಲಕ ಪುರಂ ಪಾಷಾ ಸ್ಥಳದಲ್ಲೇ ಸಾವನ್ನಪ್ಪಿ, ಲಾರಿಯಲ್ಲಿದ್ದ ಕ್ಲೀನರ್‌ ರಾಮ ಅಲಿಯಾಸ್‌ ರಮೇಶ (40) ಹಾಗೂ ಪ್ರಯಾಣಿಕ ಶರೀಫ್‌ (30) ಗಾಯಗೊಂಡಿದ್ದರು.

ಗಾಯಾಳುಗಳಾದ ರಾಮ ಅಲಿಯಾಸ್‌ ರಮೇಶ್‌ ಹಾಗೂ ಶರೀಫ್ ಲಾರಿಯಿಂದ ಇಳಿದು ಸಹಾಯಕ್ಕಾಗಿ ರಸ್ತೆ ಬದಿಯಲ್ಲಿ ನಿಂತಿದ್ದರು. ಇದೇ ವೇಳೆ ಬೆಂಗಳೂರಿನಿಂದ ಮಂಗಳೂರಿನತ್ತ ಖಾಸಗಿ ಬಸ್‌ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದ ಅರಿವಿಲ್ಲದೆ ಅತಿ ವೇಗವಾಗಿ ಸಂಚರಿಸುತ್ತಿತ್ತು.

ಹೆದ್ದಾರಿಯಲ್ಲಿ ಢಿಕ್ಕಿ ಹೊಡೆದು ನಿಂತಿದ್ದ ವಾಹನದ ಅರಿವಿಲ್ಲದೆ, ಹತ್ತಿರ ಬಂದು ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದೆ. ಈ ವೇಳೆ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಮಿನಿ ಲಾರಿ ಕ್ಲೀನರ್‌ ರಾಮ ಹಾಗೂ ಶರೀಫ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ರಾಮ ಅಲಿಯಾಸ್‌ ರಮೇಶ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಅವರು ಮೃತಪಟ್ಟರು. ಪ್ರಯಾಣಿಕ ಶರೀಫ್‌ ಗಂಭೀರ ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರು ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೋಲ್ಪೆ ನಿವಾಸಿ ಶರೀಫ್‌ ಅನ್ಯಕಾರ್ಯದ ನಿಮಿತ್ತ ಬೇರೆ ಊರಿಗೆ ಹೋದವರು ಮುಂಜಾನೆ ಉಪ್ಪಿನಂಗಡಿಗೆ ಬಂದಿದ್ದರು. ಮಿನಿ ಲಾರಿ ಏರಿ ಕೋಲ್ಪೆಗೆ ಪ್ರಯಾಣಿಸುತ್ತಿದ್ದಾಗ ಟ್ಯಾಂಕರ್‌ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಲಾರಿ ಚಾಲಕ ಕಣ್ಣ ಮುಂದೆಯೇ ಸಾವನ್ನಪ್ಪಿದ್ದ. ಬಳಿಕ ಮಿನಿ ಲಾರಿ ಕ್ಲೀನರ್‌ ಜತೆ ರಸ್ತೆ ಬದಿಯಲ್ಲಿ ಬೇರೆ ವಾಹನದ ನಿರೀಕ್ಷೆಯಲ್ಲಿದ್ದಾಗ ಬಸ್‌ ಢಿಕ್ಕಿ ಹೊಡೆದಿದೆ.

ಅಪಘಾತಕ್ಕೀಡಾದ ಮಿನಿ ಲಾರಿಯಲ್ಲಿ ಅಕ್ರಮವಾಗಿ ಮರ ಸಾಗಾಟ ನಡೆಯುತ್ತಿತ್ತು ಎಂಬ ಗುಮಾನಿ ಪರಿಸರದಲ್ಲಿ ಹಬ್ಬಿದೆ. ಇದನ್ನು ಪೊಲೀಸ್‌ ಇಲಾಖೆ ನಿರಾಕರಿಸಿದೆ. ಆದರೆ ಘಟನೆ ನಡೆದ ತತ್‌ಕ್ಷಣ ಪೊಲೀಸರು ಮಿನಿ ಲಾರಿ ತೆರವುಗೊಳಿಸಿರುವುದು, ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.

ಪರಾರಿಯಾಗಿದ್ದ ಟ್ಯಾಂಕರ್‌ ಚಾಲಕ ಪೊಲೀಸ್‌ ವಶಕ್ಕೆ ಮಿನಿ ಲಾರಿಗೆ ಢಿಕ್ಕಿ ಹೊಡೆದ ಟ್ಯಾಂಕರ್‌ ಬೆಂಗಳೂರಿನಿಂದ ಮಂಗಳೂರಿಗೆ ಕೆಮಿಕಲ್‌ ಸಾಗಾಟ ಮಾಡುತ್ತಿತ್ತು. ಘಟನೆ ನಡೆದ ಬಳಿಕ ಟ್ಯಾಂಕರ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.

ಅಪಘಾತದ ಅನಂತರ 1 ತಾಸು ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಹಲವು ಕಿ.ಮೀ. ದೂರ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು. ಬಳಿಕ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಿ ಸುಗಮ ಓಡಾಟಕ್ಕೆ ಅನುಕೂಲ ಕಲ್ಪಿಸಿದರು.

ರಾ. ಹೆ. 75ರ ಉಪ್ಪಿನಂಗಡಿ ರಸ್ತೆ ಆಸುಪಾಸಿನಲ್ಲಿ ಅಪಘಾತದ ಪ್ರಮಾಣ ಏರಿಕೆ ಕಾಣುತ್ತಿದೆ. ನೀರಕಟ್ಟೆಯಲ್ಲಿ ಈ ಹಿಂದೆ ನಡೆದ ಅಪಘಾತದಲ್ಲಿ ಹಲವರು ಗಂಭೀರ ಗಾಯಗೊಂಡ ಘಟನೆ ನಡೆದಿತ್ತು. ಟ್ಯಾಂಕರ್‌ ಮತ್ತು ಇತರ ವಾಹನಗಳ ಮಧ್ಯೆ ಇಂತಹ ಅಪಘಾತಗಳು ನಡೆಯುತ್ತಿದ್ದು, ಅತಿವೇಗದ ಚಾಲನೆ ಅಪಘಾತಕ್ಕೆ ಕಾರಣವಾಗಿದೆ.

ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಅಪಘಾತ ಪ್ರಕರಣ ನಡೆದಾಗ, ನಡೆಯದಂತೆ ಮುಂಜಾಗ್ರತೆ ವಹಿಸಲು ಸಂಚಾರಿ ಠಾಣೆ ಬೇಡಿಕೆ ಇದೆ. ಅದು ಇನ್ನೂ ಈಡೇರಿಲ್ಲ. ಮಂಗಳೂರು- ಬೆಂಗಳೂರು ಸಂಪರ್ಕದ ಹೆದ್ದಾರಿಯಿರುವ ಉಪ್ಪಿನಂಗಡಿಯಲ್ಲಿ ತಾಲೂಕಿನ ಉಳಿದ ಭಾಗಕ್ಕಿಂತ ಅತ್ಯಧಿಕ ಸಂಖ್ಯೆಯಲ್ಲಿ ಅಪಘಾತ ಪ್ರಕರಣ ನಡೆದಿವೆ.

Kalikamba-Ad

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English