ಅನಧಿಕೃತ ವ್ಯಾಪಾರಿಗಳಿಗೆ ಬಿಸಿಮುಟ್ಟಿಸುವ ಟೈಗರ್ ಕಾರ್ಯಾಚರಣೆ: ಮೇಯರ್ ಹರಿನಾಥ್

3:44 PM, Wednesday, August 31st, 2016
Share
1 Star2 Stars3 Stars4 Stars5 Stars
(No Ratings Yet)
Loading...

MCCಮಂಗಳೂರು: ಅನಧಿಕೃತ ವ್ಯಾಪಾರಿಗಳಿಗೆ ಬಿಸಿಮುಟ್ಟಿಸುವ ಟೈಗರ್ ಕಾರ್ಯಾಚರಣೆ ನಡೆಸಲು ಪಾಲಿಕೆ ತೀರ್ಮಾನಿಸಿದೆ.

ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಈ ವಿಷಯ ಪ್ರಸ್ತಾಪಿಸಿದರು. ಸ್ಟೇಟ್‍ ಬ್ಯಾಂಕ್, ಮಣ್ಣಗುಡ್ಡೆ, ಕೇಂದ್ರ ಮಾರುಕಟ್ಟೆ ಪರಿಸರಗಳಲ್ಲಿ ಬೀದಿಬದಿ ವ್ಯಾಪಾರಸ್ಥರು ಫುಟ್‍ಪಾತ್‍ಗಳಲ್ಲೇ ವ್ಯಾಪಾರ ಮಾಡುತ್ತಿರುವುದರಿಂದ ಪಾದಚಾರಿಗಳಿಗೆ ಸಂಚರಿಸಲು ಸಾಧ್ಯವಾಗುತ್ತಿಲ್ಲ.

ಫುಟ್‍ಪಾತ್‍ನಿಂದ ಬೀದಿಬದಿ ವ್ಯಾಪಾರಸ್ಥರನ್ನು ತೆರವುಗೊಳಿಸುವುದಾಗಿ ಮೇಯರ್ ನೀಡಿದ ಭರವಸೆ ಈಡೇರಿಲ್ಲ. ಈ ಹಿಂದೆ ಅವರ ಅನಧಿಕೃತ ವ್ಯಾಪಾರ ವಿರುದ್ಧ ಕಾರ್ಯಾಚರಣೆ ನಡೆಸಿದರೂ ಬಳಿಕ ಪಾಲಿಕೆ ತಟಸ್ಥ ಧೋರಣೆ ತಾಳಿದೆ ಎಂದು ಪ್ರತಿಪಕ್ಷ ಸದಸ್ಯರು ಮೇಯರ್‌ನ್ನು ತರಾಟೆ ತೆಗೆದುಕೊಂಡರು.

MCCಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ಸ್ಥಳವನ್ನು ನಿಗದಿಪಡಿಸಲು ಇನ್ನೂ ಸಾಧ್ಯವಾಗಿಲ್ಲ. ಇವರ ಅನಧಿಕೃತ ವ್ಯಾಪಾರದ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರು ಆಗ್ರಹಿಸಿದರು. ಇದಕ್ಕೆ ಸಮ್ಮತಿಸಿದ ಮೇಯರ್ ಹರಿನಾಥ್, ಇಂದಿನಿಂದ ಟೈಗರ್ ಕಾರ್ಯಾಚರಣೆ ನಡೆಸುವುದಾಗಿ ಭರವಸೆ ನೀಡಿದರು.

ಸಿಟಿ ಸೆಂಟರ್‌ನ ಅಂತಸ್ತಿನಲ್ಲಿ ಪಾರ್ಕಿಂಗ್‍ಗೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಅದು ಕೂಡ ಉದ್ದಿಮೆಯ ಸಾಲಿಗೆ ಸೇರುತ್ತದೆ. ಅದರ ವಿರುದ್ಧವೂ ಕಾರ್ಯಾಚರಣೆ ನಡೆಸುವಂತೆ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮೇಯರ್, ಉದ್ದಿಮೆ ಬೇರೆ, ಶುಲ್ಕ ವಸೂಲಿ ಬೇರೆ ಎಂದು ಸ್ಪಷ್ಟಪಡಿಸಿದರು. ಉದ್ದಿಮೆಗೆ ಡೋರ್ ನಂಬರ್ ಪಡೆದುಕೊಂಡವರಿಂದ ಡಬಲ್ ತೆರಿಗೆ ಸಂಗ್ರಹಿಸುವಂತೆ ಪ್ರತಿಪಕ್ಷ ಸದಸ್ಯರು ಸಲಹೆ ನೀಡಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ವಿರುದ್ಧ ಬೆಂಗಳೂರು ಮಾದರಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ಆಡಳಿತ ಪಕ್ಷದ ಸದಸ್ಯರು ಆಗ್ರಹಿಸಿದರು. ಇಲ್ಲಿ ಕಾಲುವೆ ಒತ್ತುವರಿ ಮಾಡಿರುವ ಬಗ್ಗೆ ವಿಸ್ತೃತ ಮಾಹಿತಿ ನೀಡುವಂತೆ ನಗರ ಯೋಜನಾ ಕೋಶಕ್ಕೆ ಮೇಯರ್ ಸೂಚಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English