ಉಪ್ಪಳ: ತೀರ್ಥಅಮಾವಾಸ್ಯೆ ದಿನವಾದ ಗುರುವಾರ ಪೈವಳಿಕೆ ಸಮೀಪದ ಬಾಯಾರುಪದವು ಬಳಿಯ ಪುರಾಣ ಪ್ರಸಿದ್ದ ಪೊಸಡಿ ಗುಂಪೆ ಪವಿತ್ರ ಗುಹಾ ಪ್ರವೇಶ ನಡೆಯಿತು.
ಮುಂಜಾನೆ ಆರಂಭವಾದ ಗುಹಾ ಪ್ರವೇಶದಲ್ಲಿ ಧಾರ್ಮಿಕ ಶ್ರದ್ದಾಳುಗಳು ಭಾಗವಹಿಸಿದ್ದರು.ಕಾನ ಶ್ರೀಕೃಷ್ಣ ಭಟ್ ಹಾಗೂ ರವೀಶ್ ಭಟ್ ನೇತೃತ್ವದಲ್ಲಿತೀರ್ಥ ಸ್ನಾನ ಹಾಗೂ ಪವಿತ್ರ ಗುಹೆ ಪ್ರವೇಶಿಸಿದ ಭಕ್ತರು ವಿಭೂತಿ ಸಂಗ್ರಹಿಸಿದರು.
ಈ ಬಾರಿಯ ಪೊಸಡಿ ಗುಂಪೆ ವಿಭೂತಿ ಸಂಗ್ರಹಕ್ಕೆ ಭಕ್ತರ ಸಂಖ್ಯೆ ವಿರಳವಾಗಿತ್ತಾದರೂ ದೂರದ ಬಂಟ್ವಾಳ ಹಾಗೂ ಪುತ್ತೂರಿನಿಂದ ಆಸ್ತಕರು ಮೊದಲ ಬಾರಿಗೆ ಗುಹಾ ಪ್ರವೇಶ ನಡೆಸಿದರು.
ಮೂರು ತಂಡವಾಗಿ ಗುಹಾ ಪಯಣ ಆರಂಭಿಸಿದ ಭಕ್ತರು ತೀರ್ಥಗುಂಪೆಯಲ್ಲಿ ಶುಚಿಯಾಗಿ ಗೋವಿಂದನ ನಾಮಸ್ಮರಣೆಯೊಂದಿಗೆ ಕಣಿವೆ ಮಾರ್ಗವಾಗಿ ಸಂಚರಿಸಿ ಸುಮಾರು ೨೦೦ ಮೀ.ದೂರವಿರುವ ವಿಭೂತಿಯಿರುವ ಕತ್ತಲ ಗುಹೆಗೆ ಪ್ರವೇಶಿಸಿದರು.
ತೀರ ಬೆಳಕಿನ ಅಭಾವವಿರುವ ಗುಹೆ ಪ್ರವೇಶಿಸಲು ದೀಪ ನಿಶಿದ್ದವಿರುವ ಕಾರಣ ಒಬ್ಬರ ಹಿಂದೆ ಒಬ್ಬರಂತೆ ಕೈ ಹಿಡಿದು ಗುಹಾ ಸುರಂಗದಲ್ಲಿ ಸಂಚರಿಸಿ ವಿಭೂತಿ ಸಂಗ್ರಹಿಸುವ ಮೂಲಕ ಪುನೀತರಾದರು.
ವಿಭೂತಿ ಸಂಗ್ರಹದ ಮಹತ್ವ
ಪುರಾತನ ಕಾಲದಿಂದ ನಡೆದು ಬರುತ್ತಿರುವ ಸಂಪ್ರದಾಯದಂತೆ ತೀರ್ಥ ಅಮಾವಾಸ್ಯೆಯ ಪುಣ್ಯ ದಿನದಂದು ಪೊಸಡಿಗುಂಪೆಯ ಪವಿತ್ರ ಗುಹೆಗೆ ಪ್ರವೇಶಿಸಿ ವಿಭೂತಿ ಸಂಗ್ರಹಿಸುವುದು ವಾಡಿಕೆಯಾಗಿದೆ.
ಶಾಕ್ತ ಹಾಗೂ ಶೈವ ಸಂಪ್ರದಾಯದಂತೆ ವಿಭೂತಿಧಾರಣೆ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಪೊಸಡಿ ಗುಂಪೆ ಗುಹಾ ಪ್ರವೇಶ ವಿಶೇಷವಾಗಿದೆ. ಇಂದು ವಿಭೂತಿಧಾರಣೆಯಂತಹ ಧಾರ್ಮಿಕ ಕ್ರಮಗಳು ಜನ ಸಾಮಾನ್ಯರಲ್ಲಿ ಕಡಿಮೆಯಾಗುತ್ತಿದ್ದರೂ ಗುಂಪೆಯ ವಿಭೂತಿ ಗುಹೆಗೆ ಪ್ರವೇಶಿಸಿ ವಿಭೂತಿ ಸಂಗ್ರಹ ನಡೆಸುವವರ ಸಂಖ್ಯೆ ಇಮ್ಮಡಿಯಾಗಿದೆ.
Click this button or press Ctrl+G to toggle between Kannada and English