ಮಂಗಳೂರು: ಕಟೀಲು ದೇವರನ್ನು ಅವಹೇಳನ ಮಾಡುವ ಮೂಲಕ ಕೋಮುವಾದ ಹಾಗೂ ಭಯೋತ್ಪಾದನೆ ಬಿತ್ತುವ ಕೆಲಸವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಇಂದು ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಹಿಂದೂ ನಾಯಕರ ಹತ್ಯೆಯಾಗುತ್ತಿದೆ. ಹಿಂದೂ ದೇವರ ಬಗ್ಗೆ ಅವಹೇಳನ ಮಾಡಲಾಗುತ್ತಿದೆ. ಇಷ್ಟಾದರೂ ಸರ್ಕಾರ ತಪ್ಪಿತಸ್ಥರ ಮೇಲೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಕಟೀಲು ದೇವಿಯ ಬಗ್ಗೆ ಅಶ್ಲೀಲವಾಗಿ ಹೇಳಿದವನು ವಿದೇಶದಲ್ಲಿದ್ದಾನೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಆದರೆ, ರಾಜ್ಯ ಸರ್ಕಾರ ಕ್ರಮಕೈಗೊಳ್ಳದಿದ್ದಲ್ಲಿ ಕೇಂದ್ರ ಸಚಿವರ ಗಮನಕ್ಕೆ ತಂದು ಕ್ರಮಕೈಗೊಳ್ಳಲು ಮನವಿ ಮಾಡಲಾಗುವುದು ಎಂದರು.
ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಕರಾವಳಿಯಲ್ಲಿ ಅರಾಜಕತೆಯಿದೆ ಎಂಬ ಮಾತಿಗೆ ಕಟಕಿಯಾಡಿದ ಬಿಎಸ್‌ವೈ. ಹೌದು. ಕೇರಳದ ಒಂದು ಗ್ರಾಮದಿಂದಲೇ 16 ಮಂದಿ ಸೇರಿ 21 ಮಂದಿ ಐಸಿಸ್‌ಗೆ ಸೇರಿರುವ ಮಾಹಿತಿಯಿದೆ ಇದು ನಿಜಕ್ಕೂ ಆತಂಕಕಾರಿ ಎಂದರು.
ಕಾವೇರಿ ನದಿ ನೀರು ಹಂಚುವಿಕೆಯ ಕುರಿತ ಸುಪ್ರೀಂ ತೀರ್ಪಿಗೆ ಪ್ರತಿಕ್ರಿಯಿಸಿದ ಅವರು, ತೀರ್ಪು ಸಂಪೂರ್ಣ ಏಕಪಕ್ಷೀಯವಾಗಿದೆ. ರಾಜ್ಯದಲ್ಲಿ ಬರಗಾಲವಿರುವಾಗ ಸುಪ್ರೀಂ ಕೋರ್ಟ್ ತಮಿಳುನಾಡಿಗೆ 11 ದಿನಗಳ ಕಾಲ 15 ಕ್ಯೂಸೆಕ್ಸ್ ನೀರು ನೀಡಬೇಕೆಂದು ಆದೇಶಿಸಿದ್ದು ಸರಿಯಲ್ಲ. ತೀರ್ಪು ಪ್ರಶ್ನಿಸಿ ಮರು ಅರ್ಜಿ ಸಲ್ಲಿಸಲಾಗುವುದು . ಇದಕ್ಕೂ ಮುನ್ನ ರಾಜ್ಯ ಸರ್ಕಾರ ತುರ್ತು ವಿಧಾನಮಂಡಲ ಅಧಿವೇಶನ ಕರೆದು ಇಲ್ಲಿ ಕಲೆಹಾಕುವ ಮಾಹಿತಿಯನ್ನು ಕೇಂದ್ರಕ್ಕೆ ನೀಡಲಿ ಎಂದರು.
Click this button or press Ctrl+G to toggle between Kannada and English