ಮಂಗಳೂರು: ಸ್ವಾತಂತ್ರ್ಯ ನಂತರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗೆ ಮಣೆ ಹಾಕಿದ್ದವು. ಅಂದಿನಿಂದ ಇಂದಿನ ತನಕ ಸರಕಾರಗಳ ಉದಾರೀಕರಣ ನೀತಿಗೆ ಭಾರಿ ಉತ್ಸಾಹ ತೋರುತ್ತಿರುವುದು ಖೇದಕರ ಎಂದು ಕರ್ನಾಟಕ ರಾಜ್ಯ ಬಿಎಸ್ಎನ್ಎಲ್ ವರ್ಕರ್ಸ್ ಫೆಡರೇಶನ್ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷ ವಸಂತ ಆಚಾರಿ ಹೇಳಿದರು.
ಕರ್ನಾಟಕ ರಾಜ್ಯ ಬಿಎಸ್ಎನ್ಎಲ್ ನಾನ್ ಪರ್ಮನೆಂಟ್ ವರ್ಕರ್ಸ್ ಫೆಡರೇಶನ್ ದ.ಕ ಮತ್ತು ಉಡುಪಿ ಜಿಲ್ಲೆಗಳ ವತಿಯಿಂದ ಬೇಡಿಕೆಗಳಿಗೆ ಆಗ್ರಹಿಸಿ ಮಂಗಳೂರು ಬಿಎಸ್ಎನ್ಎಲ್ ಪ್ರಧಾನ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸರ್ಕಾರಿ ರಂಗದಲ್ಲಿ ಖಾಸಗೀಕರಣ ತರುವ ಮೂಲಕ ಬಿಎಸ್ಎನ್ಎಲ್‌ನಲ್ಲೂ ಗುತ್ತಿಗೆ ಕಾರ್ಮಿಕರ ನೇಮಕಾತಿಗೊಳಿಸಿ ಶೋಷಣೆಗೆ ಒಳಪಡಿಸಲಾಗುತ್ತಿದೆ. ಕಾರ್ಮಿಕರು ತಮಗಾದ ಅನ್ಯಾಯದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂದಿರುವುದು ದುರ್ದೈವದ ಸಂಗತಿ ಎಂದರು.
ಪ್ರತಿಭಟನೆಗೂ ಮುನ್ನ ಎ.ಬಿ. ಸರ್ಕಲ್‌ನಿಂದ ಸಂಸ್ಥೆಯ ಪ್ರಧಾನ ಕಚೇರಿ ತನಕ ಮೆರವಣಿಗೆ ನಡೆಸಿದರು. ಬಳಿಕ ಬೇಡಿಕೆಗಳಿರುವ ಪಟ್ಟಿಯನ್ನು ಬಿಎಸ್ಎನ್ಎಲ್ ಮಹಾಪ್ರಬಂಧಕ ಜಿ.ಆರ್. ರವಿ ಅವರಿಗೆ ನೀಡಲಾಯಿತು.
ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ಸುಳ್ಯ ಸಮಿತಿಯ ಉದಯ ಕುಮಾರ್ ಕೈಲ, ನಿತ್ಯಾನಂದ, ದೇವಿಪ್ರಸಾದ್, ಬೆಳ್ತಂಗಡಿ ಸಮಿತಿಯ ಅಧ್ಯಕ್ಷ ದಿನೇಶ್ ಮುಂಡಾಜೆ, ಪುತ್ತೂರು ಸಮಿತಿಯ ಅಧ್ಯಕ್ಷ ದುಗ್ಗಪ್ಪ, ಕಾರ್ಯದರ್ಶಿ ಗಿರಿಯಪ್ಪ, ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷ ಮಹಮ್ಮದ್ ಹನೀಫ್, ಕಾರ್ಯದರ್ಶಿ ಸುನಿಲ್, ಮಂಗಳೂರು ಸಮಿತಿಯ ರಮೇಶ್ ಕದ್ರಿ, ಪುಷ್ಪಾವತಿ, ಹೇಮಚಂದ್ರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
Click this button or press Ctrl+G to toggle between Kannada and English