ಬೆಂಗಳೂರು: ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಟೀಕಿಸಲ್ಲ. ಆದರೆ ಇಂದು ಸುಪ್ರೀಂ ಕರ್ನಾಟಕಕ್ಕೆ ಮತ್ತಷ್ಟು ಶಿಕ್ಷೆ ನೀಡಿದೆ. ರಾಜ್ಯ ಸರ್ಕಾರದ ಮೇಲ್ಮನವಿಗೆ ನ್ಯಾಯ ಸಿಗುವ ಬದಲು ಶಿಕ್ಷೆ ಸಿಕ್ಕಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾವೇರಿ ವಿವಾದ ಸಂಬಂಧ ಸುಪ್ರೀಂ ತೀರ್ಪಿನ ನಂತರ ನಗರದ ಖಾಸಗಿ ಹೋಟೆಲ್‌ನಲ್ಲಿ ದೇವೇಗೌಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸುಪ್ರೀಂ ಆದೇಶ ಪಾಲಿಸಿ ಎಂದು ನಾನೇ ಹೇಳಿ ನಾರಿಮನ್, ಅನಿಲ್ ದಿವಾನ್ ಹಾಗೂ ಪ್ರಧಾನಿ ಬಳಿ ಹೋಗಿ ಚರ್ಚಿಸಿದ್ದೇನೆ. ಜನ ತಮ್ಮ ನೋವು ವ್ಯಕ್ತಪಡಿಸಲು ಪ್ರತಿಭಟಿಸುತ್ತಿದ್ದಾರೆ. ಆದರೆ ಇದಕ್ಕೆ ಸುಪ್ರೀಂ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿಂದೆ ಶಾಂತಿಯುತ ಪ್ರತಿಭಟನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕು ಎಂದು ಸುಪ್ರೀಂ ಹೇಳಿತ್ತು ಎಂದಿದ್ದಾರೆ.
ವೈಮಾನಿಕ ಸಮೀಕ್ಷೆ ಮಾಡಿ ನೋಡಿದ್ದೇನೆ. ಅರೆಕುಷ್ಕಿ ಬೇಸಾಯಕ್ಕೂ ಆತಂಕವಿದೆ. ಕುಡಿಯುವ ನೀರಿಗೂ ಆತಂಕ. ನಾನು ನೀರು ಬಿಡಿ ಎಂದು ಹೇಳಿ ಮನೆಯಲ್ಲಿ ಕೂರಲಿಲ್ಲ. ಎಲ್ಲರನ್ನೂ ಭೇಟಿಯಾಗಿ ವಿವರಿಸಿದ್ದೇನೆ. ಮೆಟ್ಟೂರು ಜಲಾಶಯದಲ್ಲಿನ ನೀರು ಸಂಗ್ರಹ ಕುರಿತು ನಮ್ಮ ವಕೀಲರ ಮಾಹಿತಿ ಬಗ್ಗೆ ಅನುಮಾನವಿದ್ದರೆ ಪರಿಶೀಲನೆ ಮಾಡಿಸಬಹುದಿತ್ತು ಎಂದರು.
ಈವರೆಗೆ ಕರ್ನಾಟಕ 9 ಟಿಎಂಸಿ ನೀರು ಬಿಟ್ಟಿದೆ. 20 ನೇ ತಾರೀಖಿನವರೆಗೆ ಅಂದ್ರೆ ಮತ್ತೆ 9 ಟಿಎಂಸಿ ಆಗುತ್ತೆ. ಇದು ನಮಗೆ ಕಠಿಣವಾದ ಶಿಕ್ಷೆ. ಪ್ರಧಾನಿ ಮೋದಿ ಮಧ್ಯ ಪ್ರವೇಶ ಮಾಡಲೇಬೇಕು ಎಂದು ಆಗ್ರಹಿಸಿದರು.
ಹಿಂದೆ ಎಸ್.ಎಂ.ಕೃಷ್ಣ ಸಿಎಂ ಆಗಿದ್ದ ವೇಳೆ ಸರ್ವಪಕ್ಷ ಸಭೆಯಲ್ಲಿ ನೀರು ಬಿಡದಿರಲು ನಿರ್ಧರಿಸಿದ್ದರು. ಆದ್ರೆ ಕೋರ್ಟ್ ಆದೇಶದಂತೆ ಮುಂದೆ ನೀರು ಬಿಡಬೇಕಾಯ್ತು. ಹಾಗೆಯೇ ಬಂಗಾರಪ್ಪನವರು ಸುಗ್ರೀವಾಜ್ಞೆ ಹೊರಡಿಸಿದ್ರು. ಆದ್ರೆ ಬಂಗಾರಪ್ಪ ಕೊನೆಗೆ ರಾಜೀನಾಮೆ ನೀಡಬೇಕಾಯ್ತು. ಹೀಗಾಗಿ ನೀರು ಬಿಡಲು ಸಿದ್ದರಾಮಯ್ಯರಿಗೆ ನಾನೇ ಸಲಹೆ ನೀಡಿದ್ದೆ ಹೊರತು ಸಿದ್ದರಾಮಯ್ಯರ ಪರವಾಗಿ ಏನೂ ಹೇಳಿಲ್ಲ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ವಿರುದ್ಧ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಮೇಲುಸ್ತುವಾರಿ ಸಮಿತಿಗೆ ರಾಜ್ಯದ ಪರಿಸ್ಥಿತಿ ಅಧ್ಯಯನ ಮಾಡಿ ಎಂದು ಸೂಚಿಸಲು ಆಗಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಮಿಳುನಾಡಿನ ಸಾಂಬಾ ಬೆಳೆಗೆ ನೀರು ಬೇಕು. ಮತ್ತೊಂದು ಬೆಳೆಗೂ ನೀರು ಬೇಕು. ಬೆಂಗಳೂರಿಗೆ ಕುಡಿಯೋ ನೀರಿಲ್ಲದಿದ್ದರೆ ಮುಂದೇನು ಮಾಡ್ತಾರೆ? ಕಾವೇರಿ ನೀರಿನ ವಿಚಾರದಲ್ಲಿ ನಾವು ಭಿಕ್ಷುಕರಾಗಿದ್ದೇವೆ ಎಂದು ಪ್ರಧಾನಿಗೆ ಹೇಳಿದ್ದೇನೆ ಎಂದು ದೇವೇಗೌಡರು ತಿಳಿಸಿದ್ದಾರೆ.
Click this button or press Ctrl+G to toggle between Kannada and English