ಮಂಗಳೂರು: ಹಬ್ಬಗಳು ಸರ್ವ ಧರ್ಮಗಳ ಪ್ರೀತಿಯ, ಭಕ್ತಿಯ ನೆಲೆಯಾಗಿ ರೂಪಿಸುವ ಮಹಾನ್ ಕಾರ್ಯ ನಮ್ಮಿಂದ ನಡೆಯಬೇಕು. ಓಣಂ ಹಬ್ಬವು ಸರ್ವಧರ್ಮೀಯರನ್ನು ಒಗ್ಗೂಡಿಸುವ ಹಬ್ಬವಾಗಿದೆ; ದೇಶಕ್ಕೆ ಕೇರಳ ರಾಜ್ಯವು ಮಾದರಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಕೇರಳ ಸಮಾಜಂ ವತಿಯಿಂದ ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ “ಓಣಂ ಸಂಭ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು.
ಕೇರಳದಲ್ಲಿ ಒಂದು ಭಾಷೆಯು ಎಲ್ಲ ವಿಭಾಗದ ಜನರನ್ನು ಒಟ್ಟುಗೂಡಿಸುತ್ತದೆ. ಇದು ದೇವರು ಅವರಿಗೆ ಒದಗಿಸಿರುವ ಆಶೀರ್ವಾದ. ಸರ್ವಧರ್ಮದ ಜನರ ಸಹಭಾಗಿತ್ವದಲ್ಲಿ ಕೆಲ ವರ್ಷಗಳಿಂದ ತಾನು ಬಂಟ್ವಾಳದಲ್ಲಿ ಗಣೇಶೋತ್ಸವ ಆಚರಿಸುತ್ತಿದ್ದು, ಶೋಭಾಯಾತ್ರೆಯಲ್ಲಿ ಕೂಡ ಶೇ. 25ರಷ್ಟು ಅನ್ಯ ಧರ್ಮದ ಜನರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಸೌಹಾರ್ದತೆಯ ನಾಡು ಕಟ್ಟುವ ಇಂತಹ ಪ್ರಯತ್ನಗಳು ಜಿಲ್ಲೆಯ ಇತರ ಕಡೆಗಳಲ್ಲಿ ಕೂಡ ಸಣ್ಣ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದು, ಹೆಚ್ಚು ಕಡೆ ವಿಸ್ತರಣೆಯಾದರೆ ಸಾಮರಸ್ಯದ ಜೀವನ ನಮ್ಮದಾಗುತ್ತದೆ ಎಂದವರು ಆಶಿಸಿದರು.
ಎಲ್ಲ ಜಾತಿ ಮತ್ತು ಧರ್ಮದ ಜನರು ಒಂದೇ ತಾಯಿಯ ಮಕ್ಕಳಂತೆ ಒಟ್ಟಾಗಿ ನಡೆಸುವ ಓಣಂ ಸಂಭ್ರಮಾಚರಣೆ ಇಂದಿನ ವಿಶಿಷ್ಟ ಕಾಲಘಟ್ಟದಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಮತೀಯ ಸಾಮರಸ್ಯಕ್ಕೆ ಆಗಾಗ ಧಕ್ಕೆಯಾಗುವ ಸೂಕ್ಷ್ಮ ಪ್ರದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಆಚರಣೆಗೆ ಅಧಿಕ ಮಹತ್ವವಿದೆ. ಇಂತಹ ಉತ್ಸವಗಳು ವರ್ತಮಾನದ ಆವಶ್ಯಕತೆ ಎಂದವರು ಹೇಳಿದರು.
ಕೇರಳ ಸಮಾಜಂ ಅಧ್ಯಕ್ಷ ಟಿ.ಕೆ. ರಾಜನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಜೆ.ಆರ್. ಲೋಬೊ, ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಎ.ಜೆ. ಸಮೂಹ ಸಂಸ್ಥೆಯ ಅಧ್ಯಕ್ಷ ಎ.ಜೆ. ಶೆಟ್ಟಿ, ಉದ್ಯಮಿ ಕರುಣಾಕರನ್ ಮುಂತಾದವರು ಮುಖ್ಯ ಅತಿಥಿಗಳಾಗಿದ್ದರು.
ಕೇರಳ ಸಮಾಜಂ ಉಪಾಧ್ಯಕ್ಷ ವಿಜಯ ಕುಮಾರ್, ಕಾರ್ಯದರ್ಶಿ ಮ್ಯಾಕ್ಸಿಂ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English