ಮಂಗಳೂರು: ಶ್ರೇಷ್ಠ ಕಲೆಯಾಗಿರುವ ಯಕ್ಷಗಾನವನ್ನು ಸವಿಯಲು ಪ್ರೇಕ್ಷಕ ವರ್ಗ ಇನ್ನಷ್ಟು ಬೆಳೆಯಬೇಕು ಎಂದು ಶ್ರೀಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ವೇ| ಮೂ| ಕಮಲಾ ದೇವಿ ಪ್ರಸಾದ್ ಆಸ್ರಣ್ಣ ಅಭಿಪ್ರಾಯಪಟ್ಟರು.
ಕಲ್ಕೂರ ಪ್ರತಿಷ್ಠಾನದ ವತಿಯಿಂದ ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ 2016ನ್ನು ಪಟ್ಲಗುತ್ತು ಮಹಾಬಲ ಶೆಟ್ಟಿ ಅವರಿಗೆ ರವಿವಾರ ನಗರದ ಶಾರದಾ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಯಕ್ಷಗಾನ ರಂಗದಲ್ಲಿ ತೊಡಗಿಸಿಕೊಂಡವರು ಅತೀ ಹೆಚ್ಚು ಜ್ಞಾನಿಗಳಾಗಿದ್ದು, ಈ ಕ್ಷೇತ್ರದ ವಿದ್ವಾಂಸರನ್ನು ತಾನು ಹೆಚ್ಚು ಇಷ್ಟಪಡುತ್ತೇನೆ. ಪ್ರತೀ ದಿನ ಅವರು ಸಾಕಷ್ಟು ಬಾರಿ ಪುರಾಣ ಅಭ್ಯಸಿಸಿ ತಮ್ಮ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳುತ್ತಾರೆ. ಜನಪದವಾಗಿದ್ದ ಯಕ್ಷಗಾನ ರಂಗದಲ್ಲಿ ವಿದ್ವಾಂಸರು ಸೇರಿಕೊಂಡು ಯಕ್ಷಗಾನ ಶ್ರೇಷ್ಠವಾಗಿ ಬೆಳೆದಿದೆ. ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಮಹಾಬಲ ಶೆಟ್ಟಿ ತಮ್ಮ ಪರಂಪರೆ ಮೂಲಕವೂ ಅದನ್ನು ಬೆಳೆಸಿಕೊಂಡು ಬಂದಿದ್ದಾರೆ. ಅವರಿಂದ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ದೀಪ ಬೆಳಗಿಸಿದ ಕಮಲಾ ದೇವಿಪ್ರಸಾದ್ ಆಸ್ರಣ್ಣ ಹಾರೈಸಿದರು.
ಶಾರದಾ ವಿದ್ಯಾಲಯದ ಸಂಚಾಲಕ ಪ್ರೊ| ಎಂ.ಬಿ. ಪುರಾಣಿಕ್ ಮಾತನಾಡಿ, ಶ್ರೇಷ್ಠ ವ್ಯಕ್ತಿ ಹಾಗೂ ಸಾಧಕನಾಗಿರುವ ಮಲ್ಪೆ ಶಂಕರನಾರಾಯಣ ಸಾಮಗ ಅವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡುತ್ತಿರುವುದು ಆ ದಿವ್ಯ ಚೇತನಕ್ಕೆ ನೀಡುವ ನಿಜವಾದ ಗೌರವ. ಯಾವುದೇ ಫಲಾಪೇಕ್ಷೆಯಿಲ್ಲದೆ ಯಕ್ಷಗಾನ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಪಟ್ಲಗುತ್ತು ಮಹಾಬಲ ಶೆಟ್ಟಿ ಅವರಿಗೆ ಈ ಪ್ರಶಸ್ತಿ ಸಂದುತ್ತಿರುವುದು ಸಂತೋಷ ದಾಯಕ ವಿಷಯ ಎಂದರು.
ಪ್ರೊ| ಜಿ.ಆರ್. ರೈ ಕಾರ್ಯಕ್ರಮ ಉದ್ಘಾಟಿಸಿದರು. ವಿವಿಧ ಕಲಾ ಪ್ರಕಾರಗಳಲ್ಲಿ ಮಿಂಚಿದ ಬಾಲಪ್ರತಿಭೆ ಶ್ರೇಯಾ ದಾಸ್ ಅವರಿಗೆ “ಕಲ್ಕೂರ ಬಾಲಸಿರಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್. ಸಾಮಗ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಶಾರದಾ ವಿದ್ಯಾಲಯದ ಉಪಾಧ್ಯಕ್ಷ ಕೆ.ಎಸ್. ಕಲ್ಲೂರಾಯ, ಪೊಳಲಿ ನಿತ್ಯಾನಂದ ಕಾರಂತ್ ಮೊದಲಾದವರು ಉಪಸ್ಥಿತರಿದ್ದರು.
ಜಿ.ಕೆ. ಭಟ್ ಸೇರಾಜೆ ಅವರು ಮಹಾಬಲ ಶೆಟ್ಟಿ ಅವರ ಬಗ್ಗೆ ಅಭಿನಂದನ ಮಾತುಗಳನ್ನಾಡಿದರು.
ಉದಯವಾಣಿಯ ಸಹ ಉಪಾಧ್ಯಕ್ಷ ಆನಂದ್ ಕೆ. ಸ್ವಾಗತಿಸಿ, ಕದ್ರಿ ನವನೀತ್ ಶೆಟ್ಟಿ ಹಾಗೂ ಸುಧಾಕರ್ ಪೇಜಾವರ ಅವರು ನಿರೂಪಿಸಿದರು.
Click this button or press Ctrl+G to toggle between Kannada and English