ರಹಸ್ಯವಾಗಿ ಮೊಬೈಲ್‌ ಕೆಮರಾ ಅಳವಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಂಧನ

10:50 AM, Thursday, September 15th, 2016
Share
1 Star2 Stars3 Stars4 Stars5 Stars
(No Ratings Yet)
Loading...

santhoshಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯದ ಜೈವಿಕ ವಿಜ್ಞಾನ ಮತ್ತು ಆನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್‌ ಕೆಮರಾ ಅಳವಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಇದೇ ವಿಶ್ವವಿದ್ಯಾನಿಲಯದ ಎಂಎಸ್ಸಿ ಮರೈನ್‌ ಜಿಯೋಲಜಿ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಸುಳ್ಯ ಎಡಮಂಗಲದ ಮರೋಳಿ ಮನೆಯ ಸಂತೋಷ್‌ ಎಂ.(22)ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ತಪ್ಪೊಪ್ಪಿಕೊಂಡಿದ್ದು ಕೃತ್ಯಕ್ಕೆ ಉಪಯೋಗಿಸಿದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಆಯುಕ್ತ ಎಂ. ಚಂದ್ರಶೇಖರ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಮಹಿಳಾ ಶೌಚಾಲಯದ ಮೇಲ್ಭಾಗದಲ್ಲಿ ಹಲಗೆಗೆ ಕನ್ನ ಕೊರೆದು ಬಿಳಿ ಬಣ್ಣದ ಬಟ್ಟೆಯಲ್ಲಿ ಸುತ್ತಿ ಇನ್‌ಟೆಕ್ಸ್‌ ಮೊಬೈಲ್‌ ಬಚ್ಚಿಟ್ಟಿರುವುದು ಸೆ. 1ರಂದು ಪತ್ತೆಯಾಗಿತ್ತು. ಮೊಬೈಲ್‌ಗೆ ಬ್ಯಾಟರಿ ಬ್ಯಾಕ್‌ಅಪ್‌ಗಾಗಿ ಪವರ್‌ ಬ್ಯಾಂಕ್‌ ಕೂಡ ಇರಿಸಲಾಗಿತ್ತು. ಜೈವಿಕ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯೊಬ್ಬರು ಅನುಮಾನದ ಮೇರೆಗೆ ಪರೀಕ್ಷಿಸಿ ದಾಗ ಈ ಘಟನೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ವಿಶ್ವವಿದ್ಯಾನಿಲಯದ ಕುಲಸಚಿವರು ನೀಡಿದ ದೂರಿನಂತೆ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

ತನಿಖೆಗಾಗಿ ಮೊಬೈಲ್‌ ಫೋನನ್ನು ತಜ್ಞರ ಪರೀಕ್ಷೆ ಗಾಗಿ ಹೈದರಾಬಾದ್‌ನ ಫೂರೆನ್ಸಿಕ್‌ ಲ್ಯಾಬ್‌ಗ ಕಳುಹಿಸಲಾಗಿದೆ. ಅದರ ವರದಿ ಇನ್ನೂ ಬಂದಿಲ್ಲ. ಆದರೆ ಡಿಸಿಪಿಗಳಾದ ಎಂ.ಎನ್‌. ಶಾಂತರಾಜು, ಡಾ| ಸಂಜೀವ್‌ ಪಾಟೀಲ್‌ ಅವರ ಮಾರ್ಗದರ್ಶನದಲ್ಲಿ, ಎಸಿಪಿ ಶ್ರುತಿ ಎನ್‌.ಎಸ್‌. ನೇತೃತ್ವದಲ್ಲಿ ಕೊಣಾಜೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಅಶೋಕ್‌ ಮತ್ತು ಪಿಎಸ್‌ಐ ಸುಕುಮಾರನ್‌ ಅವರು ಸಿಬಂದಿ ಶಿವಪ್ರಸಾದ್‌ ಕೆ., ಸಂತೋಷ್‌, ಸುಖಲತಾ, ಮಂಜುನಾಥ ಚೌಟಗಿ, ದುರ್ಗಾ ಪ್ರಸಾದ್‌ ಶೆಟ್ಟಿ, ಚಂದ್ರಶೇಖರ, ಪೊಲೀಸ್‌ ಆಯುಕ್ತರ ಕಚೇರಿಯ ಮನೋಜ್‌ ಅವರ ಸಹಕಾರದಿಂದ ವೈಜ್ಞಾನಿಕವಾಗಿ ತನಿಖೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದರು.

ಈ ಪ್ರಕರಣದಲ್ಲಿ ಅತ್ಯಂತ ಕಡಿಮೆ ಸಾಕ್ಷ್ಯಗಳಿದ್ದವು. ಪ್ರಾಥಮಿಕ ತನಿಖೆಯ ಬಳಿಕ ಮೊಬೈಲ್‌ ಫೋನನ್ನು ಫೂರೆನ್ಸಿಕ್‌ ಲ್ಯಾಬ್‌ಗ ಕಳುಹಿಸಲಾಗಿತ್ತು. ಆ ಬಳಿಕ ತನಿಖೆಯ ಸಂದರ್ಭದಲ್ಲಿ ಮೊದಲು ಮೊಬೈಲ್‌ ಸೆಟ್‌ನ ವಿವರ ಮತ್ತು ಸೂಕ್ತ ಸಾಕ್ಷ್ಯಗಳನ್ನು ಕಲೆ ಹಾಕಲಾಯಿತು. ಮೊಬೈಲ್‌ ಸೆಟ್‌ನ್ನು ಮತ್ತು ಅದನ್ನು ಅಳವಡಿಸಲು ಬೇಕಾದ ಉಪಕರಣಗಳನ್ನು ಮತ್ತು ಪವರ್‌ ಬ್ಯಾಂಕ್‌ ಪಡೆದಿರುವ ಸ್ಥಳದ ಬಗ್ಗೆ ಮಾಹಿತಿ ಹಾಗೂ ಇತರ ತಾಂತ್ರಿಕ ಮಾಹಿತಿಗಳನ್ನು ಸಂಗ್ರಹಿಸಲಾಯಿತು ಎಂದರು.

ಕೃತ್ಯ ಬೆಳಕಿಗೆ ಬಂದ ಬಳಿಕ ಆರೋಪಿ ಸಂತೋಷ್‌ 5-6 ದಿನ ಕ್ಯಾಂಪಸ್‌ ತೊರೆದಿದ್ದನು. ಬಳಿಕ ಬಂದು ಒಂದೆರಡು ದಿನ ಇದ್ದು ಪುನಃ ಹೋಗಿದ್ದನು. ವಿಜ್ಞಾನ ವಿಭಾಗದ ಆವರಣದಲ್ಲಿರುವ ಸಿಸಿ ಕೆಮರಾ ಮತ್ತು ಶೌಚಾಲಯದಲ್ಲಿ ಪತ್ತೆಯಾದ ರಹಸ್ಯ ಮೊಬೈಲ್‌ ಕೆಮರಾದಲ್ಲಿ ದಾಖಲಾಗಿದ್ದ ಫ‌ೂಟೇಜ್‌ಗಳನ್ನು, ವ್ಯಕ್ತಿಯ ಚಿತ್ರವನ್ನು ತುಲನೆ ಮಾಡಿ ಅಂತಿಮವಾಗಿ ಈತನೇ ಆರೋಪಿ ಎಂಬುದಾಗಿ ತೀರ್ಮಾನಕ್ಕೆ ಬರಲಾಯಿತು. ಆ ಬಳಿಕ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ತಪ್ಪು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಬಂಧಿಸಲಾಯಿತು ಎಂದು ವಿವರಿಸಿದರು.

ಪ್ರಕರಣದ ಬಗ್ಗೆ ಹಲವಾರು ಮಂದಿಯ ಮೇಲೆ ಸಂಶಯ ಇದ್ದ ಕಾರಣ ಒಟ್ಟು 82 ಮಂದಿ ಶಂಕಿತರನ್ನು ವಿಚಾರಣೆಗೆ ಒಳ ಪಡಿಸಲಾಗಿದೆ.

ಆರೋಪಿಯ ಮೊಬೈಲ್‌ ಹೊಚ್ಚಹೊಸ ಮೊಬೈಲ್‌ ಆಗಿರಲಿಲ್ಲ. ಇದರ ಮೂಲ ಖರೀದಿದಾರರು ಬೇರೆ ವ್ಯಕ್ತಿ ಆಗಿದ್ದರು. ಹಲವು ಮಂದಿಯ ಕೈ ಬದಲಾವಣೆಯ ಬಳಿಕ 2 ವಾರಗಳ ಹಿಂದೆಯಷ್ಟೇ ಇದನ್ನು ಆರೋಪಿ ಸಂತೋಷ್‌ ಖರೀದಿಸಿದ್ದನು. ಈ ಮೊಬೈಲ್‌ನ್ನು ಖರೀದಿಸಿದ ವಾಣಿಜ್ಯ ಕಟ್ಟಡದಿಂದಲೇ ಪವರ್‌ ಬ್ಯಾಂಕ್‌ನ್ನು ಆತ ಖರೀದಿ ಮಾಡಿದ್ದನು.

ಆರೋಪಿ ಸಂತೋಷ್‌ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದು ವ್ಯಾಸಂಗ ಮಾಡುತ್ತಿದ್ದನು. ರಹಸ್ಯ ಮೊಬೈಲ್‌ ಕೆಮರಾವನ್ನು ಅದೇ ದಿನ ಮುಂಜಾನೆ 4-5 ಗಂಟೆ ಮಧ್ಯೆ ಆತ ಫಿಕ್ಸ್‌ ಮಾಡಿದ್ದನು. ಅಷ್ಟು ಬೆಳ್ಳಂಬೆಳಗ್ಗೆ ಶೌಚಾಲಯಕ್ಕೆ ಯಾರೂ ಬರುವುದಿಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ತನ್ನ ಕಾರ್ಯವನ್ನು ಮುಗಿಸಿದ್ದನು.

ಈತ ವಿಕೃತ ಮನಸ್ಥಿತಿಯವ ನಾಗಿದ್ದರಿಂದ ಇಂತಹ ಕೆಲಸಕ್ಕೆ ಕೈಹಾಕಿರಬೇಕೆಂದು ಶಂಕಿಸಲಾಗಿದೆ ಎಂದು ಆಯುಕ್ತರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಕರಣವನ್ನು ಭೇದಿಸಿದ ಪೊಲೀಸ್‌ ತಂಡಕ್ಕೆ 10,000 ರೂ. ನಗದು ಬಹುಮಾನವನ್ನು ಘೋಷಿಸಿದ ಆಯುಕ್ತರು ಅದನ್ನು ಪತ್ರಿಕಾಗೋಷ್ಠಿಯಲ್ಲಿ ಕೊಣಾಜೆ ಇನ್ಸ್‌ಪೆಕ್ಟರ್‌ ಅಶೋಕ್‌ ಅವರಿಗೆ ವಿತರಿಸಿದರು. ಪ್ರಕರಣದ ಪತ್ತೆ ಕಾರ್ಯದಲ್ಲಿ ಸಿಬಂದಿ ಶಿವಪ್ರಸಾದ್‌ ನಿರ್ಣಾಯಕ ಪಾತ್ರ ವಹಿಸಿದ್ದು, ಬಹುಮಾನದ ಮೊತ್ತದಲ್ಲಿ 5,000 ರೂ.ಗಳನ್ನು ಅವರಿಗೆ ನೀಡಲಾಗುತ್ತದೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English